- ಗುಣಮಟ್ಟದಲ್ಲಿ ರಾಜಿ ಇಲ್ಲ: KBJNL ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಖಡಕ್ ಕ್ಲಾಸ್”
- “24 ಸಾವಿರ ಹೆಕ್ಟೇರ್ ಹನಿ ನೀರಾವರಿ ಫೇಲ್ – ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಚಿವರ ಸೂಚನೆ, ನಾನೂ ಒಬ್ಬ ಗುತ್ತಿಗೆದಾರನಾಗಿದ್ದೆ ಎಂದ ಸಚಿವ”
- “UKP-3 ಗೆ 1.33 ಲಕ್ಷ ಹೆಕ್ಟೇರ್ ಭೂಸ್ವಾಧೀನ ಸವಾಲು – ಶಾಸಕರ ಒತ್ತಡಕ್ಕೆ ಮಣಿಯಬೇಡಿ, ಕಾನೂನು ಪ್ರಕಾರವೇ ಕೆಲಸ: ಸಚಿವರ ಅಭಯ”
ಬೆಂಗಳೂರು: ಉತ್ತರ ಕರ್ನಾಟಕದ ಜೀವನಾಡಿಯಾದ ಕೃಷ್ಣಾ ಭಾಗ್ಯ ಜಲ ನಿಗಮದ (KBJNL) ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ, ಕಳಪೆ ಕಾಮಗಾರಿ ಸಹಿಸುವುದಿಲ್ಲ, ಗುಣಮಟ್ಟದಲ್ಲಿ ರಾಜಿ ಇಲ್ಲ ಎಂದು ತಾಕೀತು ಮಾಡಿದರು.
KBJNL ವ್ಯಾಪ್ತಿಯ ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ, ಕಲಬುರಗಿ, ಕೊಪ್ಪಳ, ಗದಗ ಸೇರಿದಂತೆ 7 ಜಿಲ್ಲೆ, 5 ವಲಯ, 46 ತಾಲೂಕು, 33 ವಿಧಾನಸಭಾ ಕ್ಷೇತ್ರಗಳ ಬೃಹತ್ ವ್ಯಾಪ್ತಿಯ ಸಮಗ್ರ ಮಾಹಿತಿ, ಸಿಬ್ಬಂದಿ ವಿವರ, ಕೆರೆ ತುಂಬಿಸುವ ಯೋಜನೆಗಳ ಬಗ್ಗೆ ಇಂದು ನಡೆದ ಸಭೆಯಲ್ಲಿ ಸಚಿವರು ಮಾಹಿತಿ ಪಡೆದರು.
24 ಸಾವಿರ ಹೆಕ್ಟೇರ್ ಹನಿ ನೀರಾವರಿ ಫೇಲ್ – ಗುತ್ತಿಗೆದಾರರ ವಿರುದ್ಧ ಕ್ರಮ:
24 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಒದಗಿಸಲಾದ ಹನಿ ನೀರಾವರಿ ನಿರೀಕ್ಷಿತ ಯಶಸ್ಸು ಕಾಣದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಗುತ್ತಿಗೆ ಪಡೆದವರು ಸರಿಯಾಗಿ ನೀರು ಪೂರೈಸುತ್ತಿಲ್ಲ, 5 ವರ್ಷಗಳ ನಿರ್ವಹಣಾ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಖುದ್ದು ಸ್ಥಳ ಪರಿಶೀಲನೆ ನಡೆಸುವ ತೀರ್ಮಾನ ಪ್ರಕಟಿಸಿದರು.
ಕೇವಲ ನ್ಯಾಯಾಲಯದ ನೆಪವೊಡ್ಡಿ ಕಾಮಗಾರಿ ವಿಳಂಬ ಮಾಡುವುದನ್ನು ಸಹಿಸುವುದಿಲ್ಲ, ಪ್ರತಿಯೊಂದು ಸಮಸ್ಯೆಗೂ ತ್ವರಿತ ಪರಿಹಾರ ಒದಗಿಸಲೇಬೇಕು ಎಂದು ಖಡಕ್ ನಿರ್ದೇಶನ ನೀಡಿದರು.
UKP-3 ಗೆ 1.33 ಲಕ್ಷ ಹೆಕ್ಟೇರ್ ಭೂಸ್ವಾಧೀನ:
ಕೃಷ್ಣಾ ಮೇಲ್ದಂಡೆ ಯೋಜನೆ (UKP-3) ಗಾಗಿ ಕಾಲುವೆ ಮತ್ತು ಹಳ್ಳಿಗಳು ಸೇರಿ ಒಟ್ಟು 1,33,887 ಹೆಕ್ಟೇರ್ ಭೂಸ್ವಾಧೀನದ ಬೃಹತ್ ಸವಾಲು ಇದ್ದು, ಇದರಿಂದ 100 ಟಿಎಂಸಿ ನೀರು ಶೇಖರಣೆ ಸಾಧ್ಯ. 184 ಗ್ರಾಮಗಳ ಪೈಕಿ 87 ಗ್ರಾಮಗಳಿಗೆ ಶೀಘ್ರ ನೋಟಿಫಿಕೇಷನ್ ಹೊರಡಿಸುವ ಪ್ರಕ್ರಿಯೆಯಲ್ಲಿ ಎದುರಾಗುವ ರಾಜಕೀಯ ಮತ್ತು ಸ್ಥಳೀಯ ಶಾಸಕರ ಒತ್ತಡಗಳಿಗೆ ಮಣಿಯಬೇಡಿ ಎಂದು ಅಧಿಕಾರಿಗಳಿಗೆ ಸಚಿವರು ಅಭಯ ನೀಡಿದರು. ಕಾನೂನು ಪ್ರಕಾರವೇ ಭೂಸ್ವಾಧೀನ ನಡೆಯಬೇಕು ಎಂದರು. ಈ ಕುರಿತು ಪ್ರಾದೇಶಿಕ ಆಯುಕ್ತರು ಮತ್ತು ಜನರಲ್ ಮ್ಯಾನೇಜರ್ ಜೊತೆ ವಿಶೇಷ ಸಭೆ ನಡೆಸುವುದಾಗಿ ತಿಳಿಸಿದರು.
UKP 1,2,3 ಹಂತದ ಕೋರ್ಟ್ ಕೇಸ್ ಗಳನ್ನು ಶೀಘ್ರ ಇತ್ಯರ್ಥಪಡಿಸಲು ಪ್ರತ್ಯೇಕ ಕಡತ ಸಿದ್ಧಪಡಿಸಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ವಿಜಯಪುರ ಭಾಗದ ತೋಟಗಾರಿಕಾ ರೈತರಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ನಂದವಾಡಗಿ, ಕೆರೂರು, ಬೂದಿಹಾಳ, ಭಗವತಿ, ಪಾಮನಕಲ್ಲೂರು, ಚಡಚಣ ಸೇರಿದಂತೆ ಏತ ನೀರಾವರಿ ಯೋಜನೆಗಳಿಗೆ ವೇಗ ನೀಡಬೇಕು, ಸ್ಥಗಿತಗೊಂಡ ಕಾಮಗಾರಿಗಳಿಗೆ ಮರು ಟೆಂಡರ್ ಕರೆದು ಸಾರ್ವಜನಿಕ ಹಣ ಪೋಲಾಗದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದರು. ಕೇಂದ್ರದಿಂದ ಬರಬೇಕಾದ ಅನುದಾನ ತರಲು ಶ್ರಮಿಸುವಂತೆ ಸೂಚಿಸಿದರು. ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಯಾಂತ್ರೀಕೃತ ಗೇಟ್ ಅಳವಡಿಸಿ ನೀರಿನ ದಕ್ಷತೆ ಹೆಚ್ಚಿಸಿರುವುದು ಹಾಗೂ ರೈತರು ಆ್ಯಪ್ ಮೂಲಕ ನೀರಿನ ಬೇಡಿಕೆ ಸಲ್ಲಿಸುವ ವ್ಯವಸ್ಥೆಯನ್ನು ಶ್ಲಾಘಿಸಿದರು.
“ನಾನು ಪರಿಶೀಲಿಸಿದಾಗ ಕಳ್ಳಾಟ ಬಯಲಾದರೆ ಸುಮ್ಮನೆ ಬಿಡಲ್ಲ”:
“ಯಾವುದೇ ಸೇತುವೆ ಅಥವಾ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಇಲ್ಲ, ಅಂದಾಜು ಪಟ್ಟಿ ತಯಾರಿಸುವಾಗ ಎಚ್ಚರಿಕೆ ವಹಿಸಿ. ನಾನು ಪರಿಶೀಲನೆ ನಡೆಸಿದಾಗ ಅಧಿಕಾರಿಗಳ ಕಳ್ಳಾಟ ಬಯಲಾದರೆ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ, ಜಿಲ್ಲಾಡಳಿತಕ್ಕೆ ನೀಡಿದ ಸರ್ಕಾರಿ ಹಣದ ನಯಾ ಪೈಸೆಯೂ ದುರ್ಬಳಕೆಯಾಗಬಾರದು” ಎಂದು ನೇರ ಎಚ್ಚರಿಕೆ ನೀಡಿದರು. ಸಿಬ್ಬಂದಿ ಕೊರತೆ, ಅನುದಾನ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಗುತ್ತಿಗೆದಾರರಿಗೆ ಅಭಯ:
ನಂತರ ಗುತ್ತಿಗೆದಾರರೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಅನುದಾನ ಬಿಡುಗಡೆ, ಶೇ.50 ಠೇವಣಿ, ಕಾರ್ಯಾದೇಶ ವಿಳಂಬ ಸಮಸ್ಯೆಗಳನ್ನು ಆಲಿಸಿ, “ನಾನು ಕೂಡ ಈ ಹಿಂದೆ ಗುತ್ತಿಗೆದಾರನಾಗಿದ್ದೆ, ನಿಮ್ಮ ಸಮಸ್ಯೆಗಳ ಅರಿವು ನನಗಿದೆ, ಶೀಘ್ರ ಬಗೆಹರಿಸುತ್ತೇನೆ” ಎಂದು ಭರವಸೆ ನೀಡಿದರು.
ಸಭೆಯಲ್ಲಿ KBJNL ವ್ಯವಸ್ಥಾಪಕ ನಿರ್ದೇಶಕರು, ಇಲಾಖೆ ಅಧಿಕಾರಿಗಳು ಹಾಜರಿದ್ದರು.
