ಶಾಸಕ ಸಿ. ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಲು ಒತ್ತಾಯ

ಚಾಮರಾಜನಗರ:  ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸತತ 4 ಬಾರಿ ಶಾಸಕರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿರುವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲಾ  ಕಾಂಗ್ರೆಸ್ ಕಾರ್ಯದರ್ಶಿ ಎಂ.ಶಿವಮೂರ್ತಿ ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಆ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟ ಅಭಿಮಾನಿಯಾಗಿರುವ  ಶಾಸಕ ಸಿ.ಪುಟ್ಟರಂಗಶೆಟ್ಟಿ ಚುನಾವಣೆಗಳಲ್ಲಿ ಬೆಂಕಿ ಮಹದೇವು, ವಿ.ಸೋಮಣ್ಣ, ವಾಟಾಳ್ ನಾಗರಾಜ್ ಸೇರಿದಂತೆ ಅನೇಕ ಘಟಾನುಘಟಿಗಳನ್ನು ಸೋಲಿಸಿದ್ದಾರೆ .ಅವರಿಗೆ ಸಚಿವ ಸ್ಥಾನ ನೀಡಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಕಾಂಗ್ರೆಸ್ ವರಿಷ್ಠರಲ್ಲಿ ಮನವಿ ಮಾಡಿದರು.
ಬೆಳಗ್ಗೆ 7 ಗಂಟೆಗೆ ಚಾ.ನಗರದ ಪ್ರವಾಸಿಮಂದಿರಕ್ಕೆ ಬರುವ ಶಾಸಕರು ಕ್ಷೇತ್ರದ ವಿವಿಧೆಡೆ ಸಂಚರಿಸಿ ಕೆಲಸ ಕಾರ್ಯ ಮುಗಿಸಿ ನಂತರ ಮನೆಗೆ ತೆರಳುತ್ತಾರೆ. ಹಿಂದುಳಿದ ವರ್ಗದ ನೇತಾರರಾಗಿರುವ ಸಿ.ಪುಟ್ಟರಂಗಶೆಟ್ಟಿ ಅವರು ಉಪ್ಪಾರ ಜನಾಂಗದ ಏಕೈಕ ಶಾಸಕರಾಗಿದ್ದು,24*7 ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಮಾಜಿ ಸದಸ್ಯ ಬಸವರಾಜು, ತಾಲೂಕು ಕೆಡಿಪಿ ಸದಸ್ಯ ಶ್ರೀನಿವಾಸ್, ಮುಖಂಡರಾದ ಕಾಂತರಾಜು, ಪ್ರಸಾದ್, ಅಕ್ಷಯ್, ಸ್ವಾಮಿ ಹಾಜರಿದ್ದರು.

Leave a Reply

Your email address will not be published. Required fields are marked *