ಜಿಲ್ಲಾಧಿಕಾರಿ ಶ್ರೀರೂಪ ಅವರಿಂದ ವಿಶೇಷಚೇತನರಿಗೆ ಸಾಧನ ಸಲಕರಣೆ ವಿತರಣೆ

ಚಾಮರಾಜನಗರ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಲಿಂಕೋ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ವಿಕಲಚೇತನರು ಮತ್ತು ಹಿರಿಯ ನಾಗರಿಕ ಫಲಾನುಭವಿಗಳಿಗೆ ಇಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸಿದರು. 

  ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆರ್.ವಿ.ವೈ, ಎಡಿಐಪಿ ಯೋಜನೆಯಡಿ ವಿಶೇಷಚೇತನರಿಗೆ ವಿವಿಧ ಸಾಧನ ಸಲಕರಣೆಗಳನ್ನು ಜಿಲ್ಲಾಧಿಕಾರಿ ಶ್ರೀರೂಪ ಅವರು ವಿತರಣೆ ಮಾಡಿದರು. 

  ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಜಿಲ್ಲೆಯಲ್ಲಿ ಎರಡನೇ ಬಾರಿಗೆ ದಿವ್ಯಾಂಗರಿಗೆ ಸಾಧನ ಸಲಕರಣೆಗಳನ್ನು ವಿತರಿಸುವ ಅವಕಾಶ ನನಗೆ ಒದಗಿ ಬಂದಿದೆ. ಈ ಹಿಂದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಿಎಸ್‍ಆರ್ ನೆರವಿನೊಂದಿಗೆ 450 ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಗಿದೆ. ಎರಡನೇ ಬಾರಿ ಅಲಿಂಕೊ ಸಂಸ್ಥೆ ವತಿಯಿಂದ ವಿಶೇಷಚೇತನರಿಗೆ ಸಾಧನ ಸಲಕರಣೆಗಳನ್ನ ನೀಡಲಾಗುತ್ತಿದೆ ಎಂದರು. 

  ಸರ್ಕಾರ ಹಾಗೂ ಇಲಾಖೆಗಳ ಅನುದಾನದಿಂದ ವಿಕಲಚೇತನರಿಗೆ ಬೇಕಾದ ಸಾಧನ ಸಲಕರಣೆಗಳನ್ನು ಪ್ರತಿ ವರ್ಷ ನೀಡುತ್ತಾ ಬರಲಾಗಿದೆ. ಸಿಎಸ್‍ಆರ್ ನೆರವು ಪಡೆದುಕೊಂಡು ಸಹ ಜಿಲ್ಲೆಯಲ್ಲಿ ಸಾಧನ ಸಲಕರಣೆಗಳನ್ನು ವಿತರಿಸಬೇಕಿದೆ. ವಿಶೇಷಚೇತನರಿಗೆ ಅಗತ್ಯವಿರುವ ಎಲ್ಲ ನೆರವು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿಯವರು ಹೇಳಿದರು. 

  ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಈ ಹಿಂದೆ ವಿಶೇಷಚೇತನರು ಸುಲಭವಾಗಿ ಪ್ರವೇಶಿಸಲು ರ್ಯಾಂಪ್ ವ್ಯವಸ್ಥೆ ಇರಲಿಲ್ಲ. ಅಂಧ ಫಲಾನುಭವಿಗಳಿಗು ಇಲ್ಲಿಗೆ ಬರಲು ತೊಂದರೆಯಾಗಿತ್ತು. ಇದನ್ನು ಮನಗಂಡು ಸಭಾಂಗಣ ಪ್ರವೇಶಿಸಲು ರ್ಯಾಂಪ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಸೂಚಿಸಿದ್ದೆ. ಇದೀಗ ರ್ಯಾಂಪ್ ಇತರೆ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು. 

  ವಿಶೇಷಚೇತನರೆಲ್ಲರು ಆಧಾರ್ ಕಾರ್ಡ್ ಪಡೆಯಲು ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಂಡಿದೆ. ಬಯೋಮೆಟ್ರಿಕ್, ಕಣ್ಣಿನ ಗುರುತು ಪಡೆಯಲು ಸಾಧ್ಯವಾಗದ ವಿಶೇಷಚೇತನರಿಗು ಪರ್ಯಾಯ ವ್ಯವಸ್ಥೆಗಳ ಮೂಲಕ ಆಧಾರ್ ಕಾರ್ಡ್ ಪಡೆದುಕೊಳ್ಳಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು. 

  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಕೆ. ಸುರೇಶ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಡಾ. ಕೆ. ಮಂಜುನಾಥ್, ಅಲಿಂಕೋ ಸಂಸ್ಥೆಯ ಪ್ರತಿನಿಧಿ ಕೃಷ್ಣ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *