ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಿ : ಜಿ.ಪಂ ಸಿ.ಇ.ಓ ಮೋನಾ ರೋತ್ ತಾಕೀತು

ಚಾಮರಾಜನಗರ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತರಿ ಯೋಜನೆಯಡಿ ಆದ್ಯತೆ ಮೇರೆಗೆ ಉದ್ಯೋಗ ನೀಡಲು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಸೂಚಿಸಿದರು.

   ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಕಷ್ಟು ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗಕ್ಕೆ ಬೇಡಿಕೆ ಇದೆ. ಬೇಡಿಕೆಗೆ ಅನುಗುಣವಾಗಿ ದುಡಿಯಲು ಇಚ್ಛಿಸುವ ಪ್ರತಿಯೊಬ್ಬ ಕಾರ್ಮಿಕರಿಗೂ ಉದ್ಯೋಗ ನೀಡುವುದರ ಮೂಲಕ ಕಾರ್ಮಿಕರ ಹಕ್ಕನ್ನು ರಕ್ಷಿಸುವುದು ಬಹುಮುಖ್ಯವಾಗಿದೆ ಎಂದರು. 

  ಹಲವು ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಬೇಡಿಕೆ ಇದ್ದರೂ ಉದ್ಯೋಗ ನೀಡಲು ಅನಗತ್ಯವಾಗಿ ವಿಳಂಬ ಧೋರಣೆ ಅನುಸರಿಸುವುದು ಕಂಡುಬಂದಿದ್ದು, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಜಿಲ್ಲಾ ಪಂಚಾಯತ್ ಸಿಇಒ ಅವರು ಫೇಸ್ ಅಥೆಂಟಿಕೇಶನ್ ಮೂಲಕ ಎನ್.ಎಂ.ಎಂ.ಎಸ್ ಹಾಜರಾತಿ ಪಡೆಯವುದು ಕಡ್ಡಾಯವಾಗಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದರು.

  ಪ್ರಸ್ತುತ ಉದ್ಯೋಗ ಖಾತರಿ ಯೋಜನೆಯಡಿ ನೊಂದಾಯಿಸಲಾದ ಎಲ್ಲಾ ಕಾರ್ಮಿಕರನ್ನು ಇ-ಕೆ.ವೈ.ಸಿ ಗೆ ಒಳಪಡಿಸಬೇಕಿದೆ. ಬಾಕಿ ಇರುವ ಕಾರ್ಮಿಕರ ಇ-ಕೆವೈಸಿ ಯನ್ನು ಈ ತಿಂಗಳೊಳಗೆ ಪೂರ್ಣಗೊಳಿಸುವಂತೆ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿ ಮುಕ್ತಾಯಗೊಳಿಸುವಂತೆ ನಿರ್ದೇಶನ ನೀಡಿದರು. 

  ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ (ಎನ್.ಆರ್.ಎಲ್.ಎಂ) ಇಲಾಖೆಯಡಿ ಜಿಲ್ಲೆಗೆ 7 ಅಕ್ಕ ಕೆಫೆಗಳು ಮಂಜೂರಾಗಿದ್ದು, ಈ ಮೂಲಕ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಆಹಾರ ಪೂರೈಕೆ ಕ್ಷೇತ್ರದಲ್ಲಿ ಸುಸ್ಥಿರ ಜೀವನೋಪಾಯ ಚಟುವಟಿಕೆಯನ್ನು ಒದಗಿಸುವುದಾಗಿದೆ. ಪ್ರಮುಖವಾಗಿ ಅಕ್ಕ ಕೆಫೆಯಲ್ಲಿ ಉತ್ತಮ ಗುಣಮಟ್ಟದ ಶುಚಿ-ರುಚಿ ಪೌಷ್ಟಿಕ ಆಹಾರವನ್ನು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಪೂರೈಸುವ ದೂರದೃಷ್ಟಿ ಹೊಂದಲಾಗಿದೆ. ಪ್ರತಿ ತಾಲ್ಲೂಕಿಗೆ 1 ರಂತೆ 5 ತಾಲ್ಲೂಕುಗಳಿಗೆ ಮಂಜೂರಾಗಿರುವ ಅಕ್ಕ ಕೆಫೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು. 

  ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ಪ್ರಾರಂಭಿಸುವ ಅಕ್ಕ ಕೆಫೆ ನಿರ್ವಹಣೆ ಸಂಬಂಧ ಎಸ್.ಹೆಚ್.ಜಿ ಯನ್ನು ಆಯ್ಕೆ ಮಾಡಲು ಸಮಿತಿ ಸಭೆಯನ್ನು ನಡೆಸಲಾಯಿತು. 

  ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶೃತಿ ಡಿ.ಸಿ., ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಪಂಚಾಯತ್ ರಾಜ್ ವಿಭಾಗ ಕಾರ್ಯಪಾಲಕ ಎಂಜಿನಿಯರ್ ರಮೇಶ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಉದ್ಯೋಗ ಯೋಜನೆಯ ಸಹಾಯಕ ನಿರ್ದೇಶಕರು, ಇನ್ನಿತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *