ಚಾಮರಾಜನಗರ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗುಂಡ್ಲುಪೇಟೆ ತಾಲ್ಲೂಕಿನ ಕಾಡಂಚಿನ ಗ್ರಾಮವಾದ ದೇಶಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಗುರುವಾರ (ಜೂ.4) ಭೇಟಿ ನೀಡಿ, ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮಕ್ಕಳೊಂದಿಗೆ ಜಿಲ್ಲಾಧಿಕಾರಿಯವರು ವಿವಿಧ ಜಾತಿಯ ಮರಗಳ ಬೀಜಗಳನ್ನು ಬಳಸಿ ಮಣ್ಣಿನ ಬೀಜದ ಉಂಡೆಗಳನ್ನು ತಯಾರಿಸಿದರು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಬಗ್ಗೆ ಶಾಲಾ ಶಿಕ್ಷಕರಿಂದ ಮಾಹಿತಿ ಪಡೆದು ಪರಿಸರಕ್ಕೆ ಪೂರಕವಾದ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀಗಂಧದ ಸಸಿ ನೆಟ್ಟು, ಪ್ರತಿಯೊಂದು ಗಿಡದ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ವಹಿಸಿರುವ ಶಾಲೆಯ ಉತ್ತಮ ಕಾರ್ಯ ನಡೆಯನ್ನು ಶ್ಲಾಘಿಸಿದ ಜಿಲ್ಲಾಧಿಕಾರಿಯವರು “ಏಕ್ ಪೇಡ್ ಮಾ ಕೆ ನಾಮ್” ಅಭಿಯಾನಕ್ಕೆ ಚಾಲನೆ ನೀಡಿ, ತಾಯಿ-ಮಕ್ಕಳಿಗೆ ಶ್ರೀಗಂಧದ ಸಸಿಗಳನ್ನು ವಿತರಿಸಿದರು.
ವಿದ್ಯಾರ್ಥಿಗಳೊಂದಿಗೆ ಪರಿಸರ ಸಂರಕ್ಷಣೆ, ಭವಿಷ್ಯದ ಗುರಿಗಳು ಹಾಗೂ ಶಿಕ್ಷಣದ ಮಹತ್ವದ ಕುರಿತು ಸಂವಾದ ನಡೆಸಿದ ಜಿಲ್ಲಾಧಿಕಾರಿಯವರು ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯವೆಂದು ಪ್ರೇರಣೆ ನೀಡಿದರು.
ಶಾಲೆಯ ಶೈಕ್ಷಣಿಕ ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಮೆಚ್ಚಿ, ಇಂತಹ ಕಾರ್ಯಗಳು ಜಿಲ್ಲೆಯಾದ್ಯಂತ ಮಾದರಿಯಾಗಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ಸ್ವಾಮಿ, ಶಿಕ್ಷಕ ವೃಂದ, ಇದ್ದರು.
Like this:
Like Loading...
Related