ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯ ಜವಾಬ್ದಾರಿಯುತವಾಗಿ ನಿರ್ವಹಿಸಿ : ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶ್ರೀರೂಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

  ಗುಂಡ್ಲುಪೇಟೆಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್-2026) ಸಂಬಂಧ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ) ಹಾಗೂ ಸೂಪರ್ ವೈಸರ್‍ಗಳಿಗೆ ಗುರುವಾರ (ಜೂ.4) ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು. 

  ಎಲ್ಲ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು, ಪುನರಾವರ್ತಿತ ಹಾಗೂ ಅನರ್ಹ ದಾಖಲೆಗಳನ್ನು ತೆರವುಗೊಳಿಸುವುದು, ಮತದಾರರ ಪಟ್ಟಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದು, ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ನೆರವಾಗುವುದು ಪರಿಷ್ಕರಣೆಯ ಪ್ರಮುಖ ಉದ್ದೇಶಗಳಾಗಿವೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. 

   ಜೂನ್ 30 ರಿಂದ ಜುಲೈ 29ರವರೆಗೆ ಮನೆ-ಮನೆ ಭೇಟಿ, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ,  ಆಗಸ್ಟ್ 5 ರಿಂದ ಸೆಪ್ಟೆಂಬರ್ 4ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ಹಾಗೂ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.  

  ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಗೊಳಿಸಲು ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು. 

   ತಹಶೀಲ್ದಾರ್ ಎಂ.ಎಸ್. ತನ್ಮಯ್, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಮತದಾರರ ನೊಂದಣಾಧಿಕಾರಿಗಳು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್. ವಿಶ್ವನಾಥ್ ತರಬೇತಿ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *