ಚಾಮರಾಜನಗರ: ತಾಲೂಕಿನ ಕಣ್ಣೇಗಾಲ ಗ್ರಾಮದ ಗವಿ ಫೌಂಡೇಶನ್ ಮತ್ತು ಟ್ರಸ್ಟ್ ವತಿಯಿಂದ ತಾಲೂಕಿನ ಹತ್ತು ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಬೇಕಾಗುವಷ್ಟು ನೋಟ್ ಬುಕ್ ಮತ್ತು ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಕಳೆದ 17 ವರ್ಷಗಳಿಂದಲೂ ಸುಮಾರು 10 ಸರ್ಕಾರಿ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೂ ಒಂದು ವರ್ಷದ ವ್ಯಾಸಂಗಕ್ಕೆ ಬೇಕಾದ ನೋಟ್‌ಬುಕ್, ಪೆನ್ನು ಪೆನ್ಸಿಲ್ ಕಾಪಿ ಪುಸ್ತಕ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ತಾಲೂಕಿನ ಕಣ್ಣೇಗಾಲ ಗ್ರಾಮದ ಪ್ರಸಾದ್ ಶಿವಯ್ಯ ಶೆಟ್ಟಿ ಅವರು ತಮ್ಮ ಗವಿ ಫೌಂಡೇಶನ್ ಮೂಲಕ ಉಚಿತವಾಗಿ ವಿತರಿಸುತ್ತಾ ಬಂದಿದ್ದು, ಅಂತೆಯೇ 2026-27ನೇ ಸಾಲಿಗೂ 10 ಶಾಲೆಗಳಿಗೆ ತೆರಳಿ ವಿತರಣೆ ಮಾಡಿದರು.
ಕಣ್ಣೇಗಾಲ ಗ್ರಾಮದಲ್ಲಿ ನಡೆದ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್. ಸಿದ್ಧಲಿಂಗಸ್ವಾಮಿ ಮಾತನಾಡಿ,
ತಾಲೂಕಿನ ಕಣ್ಣೇಗಾಲ ಗ್ರಾಮದವರಾದ ಪ್ರಸಾದ್ ಶಿವಯ್ಯ ಶೆಟ್ಟಿ ಅವರು, ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಬಡ ಕುಟುಂಬದಿಂದ ಬಂದ ಅವರು, ತಾವು ಓದುವಾಗ ನೋಟ್ ಪುಸ್ತಕ ಇಲ್ಲದೇ ಬವಣೆ ಪಟ್ಟಿದ್ದರಿಂದ ತನ್ನಂತೆ ತನ್ನೂರ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂಬ ದೂರದೃಷ್ಟಿಯಿಂದ ಕಳೆದ 17 ವರ್ಷಗಳಿಂದ ಚಾ.ನಗರ ತಾಲೂಕಿನ ಹತ್ತಾರು ಶಾಲೆಗಳ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿ ವಿತರಿಸುತ್ತಿದ್ದಾರೆ ಇದು ಅತ್ಯಂತ ಮಾದರಿ ಕೆಲಸ ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಅಗತ್ಯವಾದಷ್ಟು ಉತ್ತಮ ಗುಣಮಟ್ಟದ ನೋಟ್‌ಬುಕ್, ಕಾಪಿಬುಕ್, ಮಗ್ಗಿಪುಸ್ತಕ, ಪೆನ್, ಪೆನ್ಸಿಲ್, ಮೆಂಡರ್, ಎರೇಸರ್ ಇತ್ಯಾದಿ ಎಲ್ಲ ರೀತಿಯ ಕಲಿಕಾ ಸಾಮಗ್ರಿಗಳನ್ನು ನೀಡುತ್ತಾ ಬಂದಿದ್ದಾರೆ. ಇದಕ್ಕೆ ಪ್ರಸಾದ್ ಅವರ ಜೊತೆ ಅವರ ಗೆಳೆಯ ಕಿರಣ್ ಪ್ರಸಾದ್ ಅವರೂ ಕೈಜೋಡಿಸಿದ್ದಾರೆ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಸಾದ್ ಶಿವಯ್ಯ ಶೆಟ್ಟಿ, ವಿದ್ಯಾರ್ಥಿಗಳಿಗೆ ಸರ್ಕಾರ ಪಠ್ಯಪುಸ್ತಕ ಸಮವಸ್ತ್ರ ವಿತರಿಸುತ್ತದೆ. ಸರ್ಕಾರಿ ಶಾಲೆಗಳಲ್ಲಿ ಓದುವ ಬಹುತೇಕ ಮಕ್ಕಳು ಬಡವರು. ನೋಟ್ ಪುಸ್ತಕಕ್ಕೂ ಅವರಿಗೆ ತೊಂದರೆ ಇರುತ್ತದೆ. ಹೀಗಾಗಿ ತಾವು ಕಳೆದ 17 ವರ್ಷಗಳಿಂದ ತಮ್ಮೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಸೇರಿದಂತೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿದ್ದೇನೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉತ್ತಮ ಅಂಕ ಗಳಿಸಬೇಕು. ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರಸಾದ್ ಅವರ ಸ್ವಗ್ರಾಮ ಕಣ್ಣೇಗಾಲ, ಸಿಂಗನಪುರ, ಮಂಗಲದ ಹೊಸೂರು, ಭೋಗಾಪುರ, ಕೆ. ಮೂಕಹಳ್ಳಿ , ಕರಡಿಮೋಳೆ, ಹುರುಳಿ ಕೆಬ್ಬೆ ಮೋಳೆ, ಸಂತೆಮರಹಳ್ಳಿ ಮೋಳೆ, ಹೊಸಮೋಳೆ, ಹುಲ್ಲೇಪುರ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳನ್ನು ವಿತರಿಸಿದರು. ಅಲ್ಲದೇ ಕಲಿಕೋಪಕರಣಗಳನ್ನು ಅವರು ವಿತರಣೆ ಮಾಡಿದರು.
ಕಣ್ಣೇಗಾಲ ಗ್ರಾಮದ ಸರಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸಾದ್ ಅವರ ಗೆಳೆಯ ಕಿರಣ್ ಪ್ರಸಾದ್, ಪ್ರಸಾದ್ ಅವರ ತಂದೆ ಶಿವಯ್ಯಶೆಟ್ಟಿ, ಪತ್ರಕರ್ತ ಎಂ.ಇ. ಮಂಜುನಾಥ್, ಶಾಲೆಯ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಜರಿದ್ದರು.