ಶಿಕ್ಷಣ, ಆರೋಗ್ಯ ಸೇವೆ ದುಬಾರಿಯಾಗಬಾರದು- ಶ್ರೀ ಸರ್ಪಭೂಷಣ ಸ್ವಾಮೀಜಿ

  • ರಾಮಶೇಷ ಪಾಠಶಾಲೆಯ ಸೇವಾ ಮಿಲನ ಕಾರ್ಯಕ್ರಮ

ಚಾಮರಾಜನಗರ: ಶಿಕ್ಷಣ ಮತ್ತು ಆರೋಗ್ಯ ಸೇವೆ ಶ್ರೀಸಾಮಾನ್ಯನ ಕೈಗೆಟುವಂತಿರಬೇಕು, ದುಬಾರಿಯಾಗಬಾರದು ಎಂದು ಹರವೆ ಮಠದ ಶ್ರೀ ಸರ್ಪಭೂ‍ಷಣ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ರಾಮಶೇಷ ಪಾಠಶಾಲಾ ಟ್ರಸ್ಟ್, ರಾಮಶೇಷ ಸಂಸ್ಕೃತ ಪಾಠಶಾಲೆಯ 20 ನೇ ವರ್ಷದ ಸೇವಾ ಮಿಲನ ಹಾಗೂ 51 ನೇ ಸೇವಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದು ಪ್ರತಿಯೊಬ್ಬರಿಗೂ ಅಗತ್ಯವಾದ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ಬಹಳ ದುಬಾರಿಯಾಗಿವೆ. ಬಡವರು, ಕೆಳ ಮಧ್ಯಮ ವರ್ಗದ ಜನರು ತಮ್ಮ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಕೊಡಿಸಬೇಕು ಎಂದರೆ ಬಹಳ ಕಷ್ಟ. ಹಾಗೆಯೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದರು.
ಇಂಥ ಸನ್ನಿವೇಶದಲ್ಲಿ ರಾಮಶೇಷ ಪಾಠಶಾಲಾ ಟ್ರಸ್ಟ್‌ ನಿಂದ ಪರಿಮಳ ರಾಮ ವಿದ್ಯಾಮಂದಿರದಲ್ಲಿ ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಪ್ರದೀಪ್ ದೀಕ್ಷಿತ್ ಅವರು ತಮ್ಮ ಶಾಲೆ ಮಾತ್ರವಲ್ಲ, ಪ್ರತಿ ವರ್ಷ ಸೇವಾ ಮಿಲನ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳೂ ಸೇರಿದಂತೆ ಇತರ ಶಾಲಾ ಮಕ್ಕಳಿಗೆ ನೋಟ್‌ ಬುಕ್ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ಧಾರೆ. ಇದು ಅತ್ಯಂತ ಶ್ಲಾಘನೀಯ ಕೆಲಸ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದಲ್ಲದೇ ಸೇವಾ ಮಿಲನ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಿ, ಗೌರವಿಸುತ್ತಿದ್ದಾರೆ. ಇದು ಸಾಧಕರಿಗೂ ಸ್ಫೂರ್ತಿ ನೀಡುತ್ತದೆ ಎಂದು ಸರ್ಪಭೂಷಣ ಸ್ವಾಮೀಜಿ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಎಂ. ಪ್ರಭುಸ್ವಾಮಿ ಮಾತನಾಡಿ, ಪ್ರದೀಪ್‌ ಕುಮಾರ್‍ ದೀಕ್ಷಿತ್‌ ಅವರು ಗುರುಕುಲ ಮಾದರಿ ಶಾಲೆ ಸ್ಥಾಪಿಸಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದಾರೆ. ಇಂದು ಶಿಕ್ಷಣ ವಾಣಿಜ್ಯೀಕರಣವಾಗಿದೆ. ಇದರ ನಡುವೆ ಅವರು ಸರಳ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಬಡವರ ಮಕ್ಕಳಿಗೆ ಅನುಕೂಲವಾಗಲಿ. ಇಲ್ಲಿನ‌ ಮಕ್ಕಳಿಗೆ ಉಜ್ವಲ ಭವಿಷ್ಯ ಇದೆ ಎಂದು ಹಾರೈಸಿದರು.
ಪ್ರಾಚಾರ್ಯ ಪ್ರದೀಪ್‌ ಕುಮಾರ್‍ ದೀಕ್ಷಿತ್‌ ಪ್ರಾಸ್ತಾವಿಕವಾಗಿ ಮಾತನಾಡಿ, ರಾಮಶೇಷ ಪಾಠಶಾಲಾ ಟ್ರಸ್ಟ್‌ ನಿಂದ 20 ವರ್ಷಗಳಿಂದಲೂ ಸೇವಾ ಮಿಲನ ಕಾರ್ಯಕ್ರಮ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ 16 ವಿವಿಧ ಶಾಲೆಗಳ 209 ಮಕ್ಕಳಿಗೆ ಅವರ ವಾರ್ಷಿಕ ಶಿಕ್ಷಣಕ್ಕೆ ಬೇಕಾದ ನೋಟ್ ಬುಕ್, ಪೆನ್, ಪೆನ್ಸಿಲ್ ವಿತರಣೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಜ್ಞಾನ ಕ್ಷೇತ್ರದ ಭರತ್, ಪೊಲೀಸ್ ಇಲಾಖೆಯ ಮಧುಸೂದನ್ ಹರದನಹಳ್ಳಿ, ವೇದಗುರು ಗುಂಡಣ್ಣ, ಜನಸ್ನೇಹಿ ಟ್ರಸ್ಟ್‌ ಶಿವು, ಸಾವಯವ ಕೃಷಿಕ ಕಂದೇಗಾಲ ನಾಗೇಂದ್ರ, ಅಥ್ಲೀಟ್ ಹರ್ಷಿತಾ ಅವರನ್ನು ಸನ್ಮಾನಿಸಲಾಯಿತು.
ನಗರಸಭೆ ಮಾಜಿ ಸದಸ್ಯ ಗಣೇಶ್‌ ದೀಕ್ಷಿತ್‌ ಅಧ್ಯಕ್ಷತೆ ವಹಿಸಿದ್ದರು. ಇನ್ನೋರ್ವ ಮಾಜಿ ಸದಸ್ಯ ಚಂದ್ರಶೇಖರ್ ಮುಖ್ಯ ಅತಿಥಿಯಾಗಿದ್ದರು.
ಗಣೇಶ್, ಮೀರಾ ಮೂರ್ತಿ, ಮಂಜು, ರಾಮಶೇಷ ಪಾಠಶಾಲೆಯ ಸುನೀಲ್, ಗೀತಾ, ಜ್ಯೋತಿ, ಭಾಗ್ಯ, ಲತಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *