ಹನೂರಿನಲ್ಲಿ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ

ಹನೂರು: ತಾಲ್ಲೂಕಿನ ರಾಮಪುರ ಠಾಣಾ ವ್ಯಾಪ್ತಿಯ ನಾಗಣ್ಣನದೊಡ್ಡಿ ಗ್ರಾಮದ ರೈತ ಪಳನಿಸ್ವಾಮಿ ಅವರ ಜಮೀನಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಇಂದು ಬೆಳಿಗ್ಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯಿಂದ ರೈತರಿಗೆ ಉಚಿತವಾಗಿ ವಿತರಿಸಲಾದ ಮೇವಿನ ಕಿಟ್ ಯೋಜನೆಯಡಿ ಪಳನಿಸ್ವಾಮಿ ಅವರು ತಮ್ಮ ಜಮೀನಿನಲ್ಲಿ ಬೆಳೆದಿರುವ ಹಸಿರು ಮೇವಿನ ಬೆಳೆಯನ್ನು ಸಚಿವರು ಖುದ್ದು ವೀಕ್ಷಿಸಿದರು. ಬೆಳೆಯ ಇಳುವರಿ, ಗುಣಮಟ್ಟ, ನೀರಿನ ಬಳಕೆ ಹಾಗೂ ಜಾನುವಾರುಗಳಿಗೆ ಆಗುತ್ತಿರುವ ಪೌಷ್ಟಿಕಾಂಶದ ಉಪಯೋಗದ ಕುರಿತು ರೈತರಿಂದ ವಿವರವಾಗಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರೈತರು ಕೇವಲ ಕೃಷಿ ಮಾತ್ರವಲ್ಲದೆ ಪಶುಪಾಲನೆಯಲ್ಲೂ ಸ್ವಾವಲಂಬಿಯಾಗಬೇಕು. ಸರ್ಕಾರದ ಮೇವಿನ ಕಿಟ್ ಯೋಜನೆ ಜಾನುವಾರುಗಳಿಗೆ ವರ್ಷಪೂರ್ತಿ ಹಸಿರು ಮೇವು ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿದೆ. ಎಲ್ಲ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರು, ಪಶುವೈದ್ಯಾಧಿಕಾರಿಗಳು, ರಾಮಾಪುರ ಪಂಚಾಯಿತಿ ಅಧ್ಯಕ್ಷರು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *