ತಟ್ಟೆ ಹಳ್ಳ ಬದಿ ಮನೆಗಳಿಗೆ ಶಾಸಕ ಮಂಜುನಾಥ್ ಭೇಟಿ.

  • ಹಳ್ಳದ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಿಸುವುದಾಗಿ ಭರವಸೆ

ಹನೂರು: ಇಲ್ಲಿನ ಪಟ್ಟಣದ 7ನೇ ವಾರ್ಡ್‌ನ ನಿವಾಸಿಗಳ ಬಹುದಿನದ ಸಮಸ್ಯೆಗೆ ಶೀಘ್ರದಲ್ಲೇ ತಾತ್ಕಾಲಿಕ ಪರಿಹಾರ ನೀಡಿ ಮುಂದಿನ ದಿನಗಲ್ಲಿ ಶಾಶ್ವತ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು…

ಇತ್ತೀಚೆಗೆ ಹನೂರು ಪಟ್ಟಣದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸೇತುವೆ ಮೇಲೆ ನೀರು ಹರಿದು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಸಂಗ್ರಹಸಿದರು.
ಸ್ಥಳಕ್ಕೆ ಶಾಸಕರು ಭೇಟಿ ನೀಡುತ್ತಿದ್ದಂತೆ, ಮಳೆಯಿಂದಾಗಿ ಹಳ್ಳ ತುಂಬಿ ಹರಿದ ಪರಿಣಾಮ ನಾವು ಎರಡು ದಿನ ಶಾಲೆಗೆ ಬರಲು ಸಾಧ್ಯವಾಗಲಿಲ್ಲ. ದಯವಿಟ್ಟು ನಮಗೆ ಒಂದು ಪರಿಹಾರ ಮಾಡಿಕೊಡಿ ಎಂದು ಹೋಲಿ ಎಂಜೆಲ್ಸ್ ಶಾಲೆಯ ಮಕ್ಕಳು ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಶೀಘ್ರದಲ್ಲೇ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಭರವಸೆ ನೀಡಿದರು.

ಕಳೆದ ವಾರ ಸುರಿದ ಭಾರಿ ಮಳೆಗೆ 7ನೇ ವಾರ್ಡ್‌ನ ಮುಖ್ಯ ರಸ್ತೆಯಲ್ಲಿದ್ದ ಸೇತುವೆ ಕುಸಿದು, ಮಧ್ಯಭಾಗದಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿತ್ತು. ಪರಿಣಾಮ ದ್ವಿಚಕ್ರ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದ್ದು, ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಸಮಸ್ಯೆ ಎದುರಿಸುವಂತಾಗಿತ್ತು. ಮುಖ್ಯವಾಗಿ ಪ್ರತಿದಿನ ಶಾಲೆಗೆ ತೆರಳುವ 30ಕ್ಕೂ ಹೆಚ್ಚು ಮಕ್ಕಳು ಕೆಸರು ಹಾಗೂ ನೀರಿನ ನಡುವೆ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ನಿವಾಸಿಗಳು ಪಟ್ಟಣ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರು.

ವಿಷಯ ತಿಳಿದ ಶಾಸಕ ಎಂ.ಆರ್. ಮಂಜುನಾಥ್ ಅವರು ಶನಿವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾತ್ಕಾಲಿಕವಾಗಿ ದುರಸ್ತಿಗೊಳಿಸಿರುವ ಸೇತುವೆಯ ಸ್ಥಿತಿಯನ್ನು ವೀಕ್ಷಿಸಿದ ಅವರು, ಸ್ಥಳೀಯ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ನಿವಾಸಿಗಳ ಅಹವಾಲುಗಳನ್ನು ಆಲಿಸಿದರು. ಮಳೆಗಾಲದಲ್ಲಿ ಮಕ್ಕಳ ಸಂಚಾರಕ್ಕೆ ಎದುರಾಗುತ್ತಿರುವ ತೊಂದರೆ ಕುರಿತು ಸ್ಥಳೀಯರು ಶಾಸಕರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್ ಅವರು, “ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಅಡ್ಡಿಯಾಗಬಾರದು. ಇದು ನನ್ನ ಮೊದಲ ಆದ್ಯತೆ. ತಾತ್ಕಾಲಿಕ ದುರಸ್ತಿಯಿಂದ ಸಮಸ್ಯೆ ಸಂಪೂರ್ಣ ಬಗೆಹರಿಯುವುದಿಲ್ಲ. ಆದ್ದರಿಂದ ಮುಂದಿನ ಎರಡು ತಿಂಗಳೊಳಗೆ ಹೊಸದಾಗಿ, ವೈಜ್ಞಾನಿಕವಾಗಿ ಹಾಗೂ ಸುಭದ್ರವಾದ ಸೇತುವೆಯನ್ನು ನಿರ್ಮಿಸಿಕೊಡುತ್ತೇನೆ. ಇದಕ್ಕಾಗಿ ಈಗಾಗಲೇ ಅನುದಾನ ಮೀಸಲಿಡಲು ಸೂಚಿಸಿದ್ದೇನೆ. ಮುಂದೆ ಮಳೆ ಬಂದರೂ ಇದೇ ರೀತಿಯ ಪರಿಸ್ಥಿತಿ ಎದುರಾಗದಂತೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು” ಎಂದು ಭರವಸೆ ನೀಡಿದರು.

ಶಾಸಕರ ಭರವಸೆಯಿಂದ 7ನೇ ವಾರ್ಡ್‌ನ ನಿವಾಸಿಗಳು ಸಂತಸ ವ್ಯಕ್ತಪಡಿಸಿದರು. ಬಹುದಿನಗಳಿಂದ ಎದುರಿಸುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದ್ದು, ವಿಶೇಷವಾಗಿ ಶಾಲಾ ಮಕ್ಕಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸ್ಥಳೀಯರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹರೀಶ್, ಮಾಜಿ ಪಟ್ಟಣ ಪಂಚಾಯತ್ ಸದಸ್ಯರಾದ ಸಿದ್ದರಾಜು, ಸದಸ್ಯರಾದ ಪ್ರತಿಮಾ ರವೀಂದ್ರ,ಸಿಂಗನಲ್ಲೂರು ರಾಜಣ್ಣ ನಟರಾಜು ಗೌಡ, ಅಮೀನ್, ರಂಗನಾಥ್, ಮುತ್ತು ಆಚಾರ್,ರಂಗಸ್ವಾಮಿ ನಾಯ್ಡು,ಹುಚ್ಚಯ್ಯ,ಡಿ ಕೆ ರಾಜು,
ಪ್ರವೀಣ್, ಬಸವರಾಜು, ಮಾದುರಾಜ್,ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *