ಹನೂರು: ಬೆಂಗಳೂರಿನಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರಿದ್ದ ಕಾರು ಹಾಗೂ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಹನೂರು ಪಟ್ಟಣದ ಹೊರವಲಯದ ಮಹದೇಶ್ವರ ಐಟಿಐ ಕಾಲೇಜು ಮುಂಭಾಗ ನಡೆದಿದೆ.
ಗಾಯಗೊಂಡವರು: ಸುವರ್ಣ (37), ಲೋಕೇಶ್ (20), ಶ್ರೇಯ (16), ರುಕ್ಮಿಣಿ (42), ಮಂಜೇಶ್ (43), ಭಾಗ್ಯಮ್ಮ (55), ಮಹಾದೇವ (50), ಮನ್ಸೂರ್ (38), ಮೊಹಮ್ಮದ್ ತೌಫಿಕ್ (28) ಹಾಗೂ ನಿಜಾಮ್ (29).
ಮಾದಪ್ಪನ ದರ್ಶನಕ್ಕೆ ಹೊರಟಿದ್ದ ಭಕ್ತರ ಕಾರು ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿದ್ದು, ಕಾರಿನಲ್ಲಿದ್ದವರಿಗೆ ಕೈಕಾಲು ಮುರಿತ ಸೇರಿದಂತೆ ತೀವ್ರ ಗಾಯಗಳಾಗಿವೆ.
ಮಾನವೀಯತೆ ಮೆರೆದ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ: ಅಪಘಾತದ ಮಾಹಿತಿ ತಿಳಿದು ಅಗ್ನಿಶಾಮಕ ಠಾಣಾಧಿಕಾರಿ ರವೀಂದ್ರ ನೇತೃತ್ವದಲ್ಲಿ ಮಹೇಶ್, ಜಯಪ್ರಕಾಶ್, ಅಶೋಕ್, ನಾಗಪ್ಪ, ಅನಿಲ್, ಲಿಂಗೇಶ್, ಹರ್ಷ, ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ನಾಗೇಂದ್ರ, ಪ್ರಕಾಶ್, ಗಣೇಶ್ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಗಾಯಗೊಂಡು ರಸ್ತೆಯಲ್ಲಿ ನರಳುತ್ತಿದ್ದವರನ್ನು 108 ಆಂಬುಲೆನ್ಸ್ ಸಿಗದ ಕಾರಣ, ರಸ್ತೆಯಲ್ಲಿ ಹೋಗುತ್ತಿದ್ದ ಆಟೋಗಳನ್ನು ತಡೆದು ಹೋಲಿ ಕ್ರಾಸ್ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.
ವಿಷಯ ತಿಳಿದು ಹನೂರು ಪೊಲೀಸ್ ಇನ್ಸ್‌ಪೆಕ್ಟರ್ ಆನಂದಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.