ಹನೂರು: ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ನೂತನ ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಹನೂರು ತಾಲೂಕಿನ ಮಂಗಲ ಗ್ರಾಮದ ಹುಲಸುಗುಡ್ಡೆ ಬೋರೆ ಬಳಿ ಶಾಸಕ ಎಂ.ಆರ್. ಮಂಜುನಾಥ್ ಅವರು ಗಂಗೆಪೂಜೆ ಹಾಗೂ ಸ್ಥಳಶುದ್ಧಿ ಪೂಜೆ ನೆರವೇರಿಸುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರಜಾಸೌಧದ ಮಾದರಿ ನಕ್ಷೆಯನ್ನು ಪ್ರದರ್ಶಿಸಿದ ಶಾಸಕರು, ಕಟ್ಟಡದ ವಿನ್ಯಾಸ, ಕಾಮಗಾರಿಯ ಉದ್ದೇಶ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರಿಗೆ ವಿವಿಧ ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ದೊರೆಯುವಂತೆ ಸುಸಜ್ಜಿತ ಕಟ್ಟಡ ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ನೂತನ ಪ್ರಜಾಸೌಧ ನಿರ್ಮಾಣದ ಕನಸು ಸುಮಾರು ಒಂದು ದಶಕದ ಹಿಂದಿನದ್ದಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದರೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ತಾವು ಶಾಸಕರಾಗಿ ಆಯ್ಕೆಯಾದ ಬಳಿಕ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ನಿರಂತರವಾಗಿ ಅನುಸರಣೆ ನಡೆಸಿದ್ದಾಗಿ ಎಂ.ಆರ್. ಮಂಜುನಾಥ್ ಹೇಳಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು 2024-25ನೇ ಸಾಲಿನಲ್ಲಿ ಅನುದಾನ ನೀಡುವ ಭರವಸೆ ನೀಡಿದ್ದು, ಇದೀಗ ಸರ್ಕಾರದಿಂದ ಅನುದಾನ ಮಂಜೂರಾಗಿ ಕಾಮಗಾರಿಗೆ ಚಾಲನೆ ದೊರೆತಿರುವುದು ಸಂತಸದ ಸಂಗತಿ ಎಂದರು.
16 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಪ್ರಜಾಸೌಧ ನಿರ್ಮಿಸುವ ಗುರಿ ಪ್ರಸ್ತುತ 8 ಕೋಟಿ ಅನುದಾನದಲ್ಲಿ ಬಿ-ಸಿ ಗ್ರೇಡ್ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಆದರೆ ಹನೂರಿಗೆ ಅತ್ಯಾಧುನಿಕ ಹಾಗೂ ಸುಸಜ್ಜಿತ ಪ್ರಜಾಸೌಧ ನಿರ್ಮಿಸುವ ಉದ್ದೇಶ ಹೊಂದಿದ್ದು, ಮುಂದಿನ ಹಂತದಲ್ಲಿ ಸುಮಾರು 16 ಕೋಟಿ ವೆಚ್ಚದಲ್ಲಿ ಸಿ ಗ್ರೇಡ್ ಕಟ್ಟಡವಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಮಂಜುನಾಥ್ ತಿಳಿಸಿದರು. ಪ್ರಸ್ತುತ ಇರುವ ಗ್ರೌಂಡ್ ಪ್ಲಸ್ ಫಸ್ಟ್ ಫ್ಲೋರ್ ವಿನ್ಯಾಸವನ್ನು ಮತ್ತಷ್ಟು ವಿಸ್ತರಿಸಿ, ಪೂರ್ಣ ಪ್ರಮಾಣದ ಕಟ್ಟಡ ನಿರ್ಮಿಸುವ ಉದ್ದೇಶವಿದೆ ಎಂದರು.
ಪ್ರಜಾಸೌಧದ ವಿನ್ಯಾಸದಲ್ಲಿ ಗಾಳಿ, ಬೆಳಕು ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನೈಸರ್ಗಿಕ ಬೆಳಕು ಮತ್ತು ಗಾಳಿ ದೊರೆಯುವ ಮೂಲಕ ವಿದ್ಯುತ್ ಬಳಕೆ ಕಡಿಮೆ ಮಾಡುವ ವ್ಯವಸ್ಥೆ, ಶೌಚಾಲಯಗಳ ದುರ್ವಾಸನೆ ಹೊರಹೋಗಲು ಪ್ರತ್ಯೇಕ ವೆಂಟ್ ವ್ಯವಸ್ಥೆ, ಲಿಫ್ಟ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಆರ್ಕಿಟೆಕ್ಟ್ ಅವರೊಂದಿಗೆ ಹಲವು ಬಾರಿ ಚರ್ಚಿಸಿ ವಿನ್ಯಾಸದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದ್ದು, ಇದೇ ಮಾದರಿಯ ವಿನ್ಯಾಸವನ್ನು ರಾಜ್ಯದ 53 ಕ್ಷೇತ್ರಗಳ ಪ್ರಜಾಸೌಧಗಳಿಗೂ ಕಳುಹಿಸಲಾಗಿದೆ ಎಂದು ಹೇಳಿದರು.
ಹನೂರಿನ 100 ಹಾಸಿಗೆಗಳ ಆಸ್ಪತ್ರೆ ಕಟ್ಟಡಕ್ಕೂ ಇದೇ ರೀತಿಯ ವಿನ್ಯಾಸ ರೂಪಿಸಲಾಗಿದೆ. ಸದ್ಯ 50 ಹಾಸಿಗೆಗಳ ಆಸ್ಪತ್ರೆ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಹೆಚ್ಚುವರಿಯಾಗಿ 20 ಹಾಸಿಗೆಗಳನ್ನು ಸೇರ್ಪಡೆಗೊಳಿಸಲು 14 ಕೋಟಿ ಅನುದಾನಕ್ಕಾಗಿ ಮುಖ್ಯ ಎಂಜಿನಿಯರ್ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಯಾವುದೇ ದೊಡ್ಡ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಸಮರ್ಪಕ ಪೂರ್ವಸಿದ್ಧತೆ ಅಗತ್ಯವಾಗಿದ್ದು, ಪ್ರಜಾಸೌಧ ಹಾಗೂ ಆಸ್ಪತ್ರೆ ಕಟ್ಟಡಗಳ ನಿರ್ಮಾಣಕ್ಕೂ ಸಾಕಷ್ಟು ಹೋಂವರ್ಕ್ ಮಾಡಲಾಗಿದೆ. ಸುಮಾರು ಮೂರೂವರೆ ವರ್ಷಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೆ. ಇದೀಗ ಕಾಮಗಾರಿಗೆ ಚಾಲನೆ ದೊರೆತಿರುವುದು ಸಂತಸದ ಸಂಗತಿ ಎಂದರು.
ಪ್ರಜಾಸೌಧದ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಯಾಗಬೇಕು. ರೈತರು ಹಾಗೂ ಸಾರ್ವಜನಿಕರು ಭೂಮಿ, ಕಂದಾಯ ಸೇರಿದಂತೆ ವಿವಿಧ ಸರ್ಕಾರಿ ದಾಖಲೆಗಳ ಕೆಲಸಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸಿ, ಅಗತ್ಯ ಸೇವೆಗಳು ಒಂದೇ ಸೂರಿನಡಿ ದೊರೆಯುವಂತಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.
ಇದೆ ಸಮಯದಲ್ಲಿ ಚಾಮುಲ್ ಮಾಜಿ ಅಧ್ಯಕ್ಷರಾದ ಗುರುಮಲ್ಲಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಾಗ್ಯ ಬಾಬಣ್ಣ, ಚಾಮುಲ್ ನಿರ್ದೇಶಕರಾದ ಉದ್ದನೂರುಪ್ರಸಾದ್, ಸಿಂಗಾನಲ್ಲೂರು ರಾಜಣ್ಣ, ಗುರುಸ್ವಾಮಿ, ದೇವರಾಜು, ಇಂದುವಾಡಿ ಗೋವಿಂದ ಕಿರಣ್ ಕುಮಾರ್, ಅಂಜುಂಪಾಷ,
ಗೋವಿಂದ, ನಟರಾಜುಗೌಡ, ತಿರುಪತಿ, ಮಾದಪ್ಪ,ಕರಿಯಪ್ಪ, ಬಸವರಾಜು, ನಾಗಯ್ಯ, ಜಡರುದ್ರಸ್ವಾಮಿ,ಸೋಮ, ಅಮೀನ್, ವೆಂಕಟೇಶ್,ರಾಜು,ಸೇರಿದಂತೆ ಸಾರ್ವಜನಿಕರು ಇದ್ದರು..