ಚಾಮರಾಜನಗರ: ದೇಶದ ಎಲ್ಲಾ ವರ್ಗಗಳ ಜನರ ಹಿತ ಬಯಸಿ ಎಲ್ಲರನ್ನೊಳಗೊಂಡ ಕಾನೂನು ಚೌಕಟ್ಟಿನಡಿ ಸಂವಿಧಾನ ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಾನವೀಯ ಮೌಲ್ಯವುಳ್ಳ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.
ನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್‍ರವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಬಾಲ್ಯದಲ್ಲಿ ಸಾಕಷ್ಟು ಅಪಮಾನ, ನೋವು, ಸಂಕಷ್ಟ ಅನುಭವಿಸಿದ್ದರೂ ಮಾನವೀಯ ಹೃದಯವಂತಿಕೆ ಅವರಲ್ಲಿತ್ತು. ಅದಕ್ಕಾಗಿಯೇ ಅವರು ದೇಶದಲ್ಲಿದ್ದ ಜಾತಿಪದ್ದತಿ, ಸಾಮಾಜಿಕ ತಾರತಮ್ಯ, ಸಾಮಾಜಿಕ, ಅರ್ಥಿಕ, ಕಾನೂನು ಸ್ಥಿತಿಗತಿಗಳನ್ನು ಆಳವಾಗಿ ಅಧ್ಯಯನ ಮಾಡಲು ಸಾಧ್ಯವಾಯಿತು. ಬಹಳ ವೈವಿಧ್ಯಮಯ ಧರ್ಮ, ಸಂಸ್ಕøತಿ, ಭಾಷೆಗಳಿರುವ ಭಾರತದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳ ಮೂಲಕ ಸಾಮಾಜಿಕ ಸುಧಾರಣೆಗೆ ಒತ್ತು ನೀಡಿದರು ಎಂದರು.
ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದ ಸ್ಥಿತಿ ಬಹಳ ಚಿಂತಾಜನಕವಾಗಿತ್ತು. ಅಂತಹ ಸಮಯದಲ್ಲಿ ಸಾಕಷ್ಟು ತಜ್ಞರೊಂದಿಗೆ ಚರ್ಚಿಸಿ, ಚಿಂತನೆ ನಡೆಸಿ ಅದ್ಭುತ ಸಂವಿಧಾನವನ್ನು ಕೊಡುಗೆ ನೀಡಿದರು. ಎಲ್ಲಾ ಸಮಾಜ, ಸಮುದಾಯಗಳ ಜನರು ಸಂವಿಧಾನದ ಭಾಗವಾಗಲು ಅನುವು ಮಾಡಿಕೊಟ್ಟರು. ಅಂಬೇಡ್ಕರ್ ಅವರ ಮೌಲ್ಯಯುತ ಆದರ್ಶ ವಿಚಾರಧಾರೆಗಳನ್ನು ಸ್ಮರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತರು ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ರಹಮತ್ ತರೀಕೆರೆ ಅವರು ಮುಖ್ಯ ಭಾಷಣ ಮಾಡಿ ಎಲ್ಲರ ಒಳಿತನ್ನು ಬಯಸಿದ್ದ ಅಂಬೇಡ್ಕರ್ ಸಂವಿಧಾನವನ್ನು ಕೇವಲ ದಲಿತರು, ಶೋಷಿತರಿಗಾಗಿ ಸಂವಿಧಾನ ರಚಿಸಿಲ್ಲ. ಎಲ್ಲಾ ಭಾರತೀಯರಿಗಾಗಿ, ಎಲ್ಲಾ ಸಮಾಜ, ಸಮುದಾಯ, ವರ್ಗಗಳ ಏಳಿಗೆಗಾಗಿ ರಚಿಸಿದ್ದಾರೆ. ಸಂವಿಧಾನದ ಸೌಲಭ್ಯ ಪಡೆಯುತ್ತಿರುವ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬೇಡ್ಕರ್ ಜನ್ಮದಿನವನ್ನು ಊರಹಬ್ಬ, ನಾಡಹಬ್ಬವಾಗಿ ಆಚರಿಸುವಂತಾಗಬೇಕು. ಸಂವಿಧಾನ ಪೀಠಿಕೆಯ ಆರಂಭದಲ್ಲಿರುವ We ಖಿhe Peoಠಿಟe ಎಂದರೇ ನಾವು..ನಾವೆಲ್ಲರೂ ಸೇರಿ, ಎಲ್ಲರನ್ನು ಒಳಗೊಳ್ಳುವಿಕೆಯೆ ಆಗಿದೆ ಎಂದರು.
ಇಡೀ ಜೀವನಪರ್ಯಂತ ಕಷ್ಟ, ನೋವುಗಳನ್ನು ಅನುಭವಿಸಿದ್ದರು ಭಾರತವನ್ನು ಎಲ್ಲಾ ಸಮಾಜಗಳು ಸೇರಿ ಕಟ್ಟಬೇಕು, ಸಮುದಾಯಗಳನ್ನು ಬೆಸೆಯುವ ಭಾರತವಾಗಬೇಕು ಎಂಬುದೇ ಅಂಬೇಡ್ಕರ್ ಅವರ ಆಶಯವಾಗಿತ್ತು. ವೈಯಕ್ತಿಕವಾಗಿ ಸುಖ, ಸಂತೋಷ ಕಾಣದ ವ್ಯಕ್ತಿ ಇಡೀ ದೇಶದ ಜನರ ಸುಖ, ಶಾಂತಿ, ನೆಮ್ಮದಿಗಾಗಿ ಜೀವನವನ್ನೆ ಮುಡಿಪಾಗಿಟ್ಟರು. ಅಪಾರ ಪುಸ್ತಕ ಪ್ರೇಮಿಯಾಗಿದ್ದ ಅಂಬೇಡ್ಕರ್ ಜೀವನದುದ್ದಕ್ಕೂ ಓದುವುದರಲ್ಲೆ ಇಡೀ ರಾತ್ರಿ ಕಳೆಯುತ್ತಿದ್ದರು. ದೇಶದ ಸಾಮಾಜಿಕ ರೋಗಗಳ ಬಿಡುಗಡೆಗಾಗಿ ಜ್ಞಾನದ ಯುದ್ಧ ಆರಂಭಿಸಿದ್ದ ಅಂಬೇಡ್ಕರ್ ಜ್ಞಾನದ ಸಂಗಮವಾಗಿದ್ದಾರೆ ಎಂದು ಪ್ರೊ. ರಹಮತ್ ತರೀಕೆರೆ ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಇತಿಹಾಸದ ಪುಟವಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಕಾಲಘಟ್ಟದಲ್ಲಿಯೂ ಪ್ರಸ್ತುತವಾಗಿದ್ದಾರೆ. ಸಮಾಜ ಸುಧಾರಕರು, ರಾಜಕೀಯ ಚಿಂತಕರು, ಕಾನೂನು ತಜ್ಞರು, ಅರ್ಥಶಾಸ್ತ್ರಜ್ಞರು ಆಗಿದ್ದ ಅಂಬೇಡ್ಕರ್ ಅವರು ಆರ್.ಬಿ.ಐ ಸ್ತಾಪನೆಗೆ ಅಪಾರ ಕೊಡುಗೆ ನೀಡಿದ್ದಾರೆ. ನದಿಗಳ ಜೋಡಣೆ, ರೈತರ ಬೆಳೆಗಳಿಗೆ ಬೆಂಬಲಬೆಲೆ, ಸಣ್ಣ ಹಿಡುವಳಿದಾರರ ಹಿತ, ಕೃಷಿ, ಕೈಗಾರಿಕೆ, ಕಾರ್ಮಿಕರ ವಿಮಾ ಯೋಜನೆ, ಕನಿಷ್ಠ ವೇತನ ಸೇರಿದಂತೆ ದೇಶದ ಅನೇಕ ಯೋಜನೆ ಸುಧಾರಣೆಗಳಿಗೆ ಮುನ್ನುಡಿ ಬರೆದರು. ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಮಾನತೆ, ಮತದಾನದ ಹಕ್ಕು ನೀಡಿದರು ಎಂದರು.
ಮೈಸೂರಿನ ವಿಶ್ವಮೈತ್ರಿ ಬುದ್ದವಿಹಾರದ ಡಾ. ಕಲ್ಯಾಣ ಸಿರಿ ಭಂತೇಜಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಅಂಬೇಡ್ಕರ್ ಜಗತ್ತಿನ ಶ್ರೇಷ್ಠ ಸಂವಿದಾನವನ್ನು ಬಾರತಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸಂವಿಧಾನದ ಮೂಲ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಅಶಯಗಳಡಿ ಸಮಸಮಾಜ ಕಟ್ಟಲು ಎಲ್ಲರೂ ಮುಂದಾಗಬೇಕು ಪ್ರಜ್ಞಾಪೂರ್ವಕ ಚಿಂತನೆಯಡಿ ಪ್ರಬುದ್ಧ ಬದುಕು ಕಟ್ಟಿಕೊಳ್ಳಬೇಕು. ನಮ್ಮ ನಡೆ ಬುದ್ಧನ ಕಡೆಗಿ ಇರಬೇಕು ಎಂದರು.
ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚೂಡಾ ಅಧ್ಯಕ್ಷರಾದ ಮಹಮದ್ ಅಸ್ಗರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶೃತಿ, ಡಿ.ವೈ.ಎಸ್.ಪಿ. ಸ್ನೇಹರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮುನಿರಾಜು, ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ಇತರರು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.
ಗುಂಡ್ಲುಪೇಟೆಯ ಪದ್ಮಪಾಣಿ ಲಲಿತಾ ಕಲಾ ಅಕಾಡೆಮಿಯ ನಾರಾಯಣಸ್ವಾಮಿ ಮತ್ತು ತಂಡದವರಿಂದ ಡಾ. ಬಿ.ಆರ್. ಅಂಬೇಡ್ಕರ್ ರವರ ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡುವರು. ಡಾ. ಬಿ.ಆರ್. ಅಂಬೇಡ್ಕರ್ ಭವನದಿಂದ ಬೆಳ್ಳಿರಥದಲ್ಲಿ ಅಲಂಕೃತ ಡಾ. ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರದ ಮೆರವಣಿಗೆಯು ವಿವಿಧ ಅಕರ್ಷಕ ಕಲಾತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ವೇದಿಕೆಯ ಸ್ಥಳ ತಲುಪಿತು.