ಮಸಣಾಪುರ, ಹೊಂಗನೂರು ಗ್ರಾಮಕ್ಕೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ ಭೇಟಿ

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಎಸಗಿದ ಪ್ರಕರಣದ ಹಿನ್ನೆಲೆಯಲ್ಲಿ ತಾಲೂಕಿನ ಮಸಣಾಪುರ ಹಾಗೂ ಹೊಂಗನೂರು ಗ್ರಾಮಕ್ಕೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ. ಎಲ್. ಮೂರ್ತಿ ಅವರು ಇಂದು ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು. 

ಮಸಣಾಪುರಕ್ಕೆ ಮೊದಲು ಭೇಟಿ ನೀಡಿದ ಅಧ್ಯಕ್ಷರು ಘಟನೆ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ತದ ನಂತರ ಗ್ರಾಮಸ್ಥರ ಜೊತೆ ಸಭೆ ನಡೆಸಿ ಮಾತನಾಡಿದ ಅಧ್ಯಕ್ಷರಾದ ಡಾ. ಎಲ್. ಮೂರ್ತಿ ಅವರು ಇಲ್ಲಿ ನಡೆದ ಅಹಿತಕರ ಘಟನೆಯಿಂದ ಸಮುದಾಯ ನೊಂದಿರುವುದು ವಾಸ್ತವ. ಇಂತಹ ಘಟನೆಗಳು ಎಲ್ಲಿಯೂ ನಡೆಯಬಾರದು. ರಾಷ್ಟ್ರ ನಾಯಕರು, ದಾರ್ಶನಿಕರಿಗೆ ಅಪಮಾನ ಮಾಡುವುದು ಮಾನಸಿಕ ವೇದನೆಯಾಗಿದೆ ಎಂದರು. 

ಸೂಕ್ಷ್ಮ ಗ್ರಾಮಗಳು ಇರುವ ಪ್ರದೇಶಗಳನ್ನು ಗುರುತಿಸಬೇಕು. ರಾಷ್ಟ್ರ ನಾಯಕರು, ದಾರ್ಶನಿಕರ ಭಾವಚಿತ್ರ, ಪುತ್ಥಳಿಗೆ ಅವಮಾನವಾಗದಂತೆ ತಡೆಯುವ ನಿಟ್ಟಿನಲ್ಲಿ ಕಠಿಣವಾದ ಕಾಯ್ದೆ ರೂಪಿಸುವ ಸಂಬಂಧ ಆಯೋಗವು ಸರ್ಕಾರದ ಗಮನ ಸೆಳೆಯಲಿದ್ದು, 15 ದಿನಗಳೊಳಗೆ ಈ ಕುರಿತು ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. 

ಗ್ರಾಮದಲ್ಲಿ ಘಟನೆ ನಡೆದ ಕೂಡಲೇ ಜಿಲ್ಲಾಡಳಿತದಿಂದ ವರದಿ ತರಿಸಿಕೊಳ್ಳಲಾಯಿತು. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಅನ್ಯಾಯವಾಗದಂತೆ ಪ್ರತ್ಯೇಕ ಕಾಯ್ದೆ ತಂದು ರಕ್ಷಣೆ ಆಗಬೇಕು ಎಂಬುದು ಆಯೋಗದ ಉದ್ದೇಶವಾಗಿದೆ. ಯಾರು ಭಯಬೀತರಾಗಬೇಕಿಲ್ಲ. ಕಾನೂನು ವ್ಯವಸ್ಥೆಯಿದೆ. ಅಹಿತಕರ ಘಟನೆಗೆ ಕಾರಣರಾದವರಿಗೆ ಕಾನೂನು ಕ್ರಮವಾಗಲಿದೆ ಎಂದು ಆಯೋಗದ ಅಧ್ಯಕ್ಷರಾದ ಡಾ. ಎಲ್. ಮೂರ್ತಿ ಅವರು ಹೇಳಿದರು.

ಬಳಿಕ ಹೊಂಗನೂರು ಗ್ರಾಮಕ್ಕೆ ತೆರಳಿ ಅಲ್ಲಿಯೂ ಘಟನಾ ಸ್ಥಳ ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದರು. 

ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರಾದ ಎಂ. ಕುಂಬಯ್ಯ, ಎನ್. ದಿವಾಕರ್, ಗೀತಾ ಥಾಂವಶಿ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ಆಯೋಗದ ಕಾರ್ಯದರ್ಶಿಗಳಾದ ಡಾ. ಹೆಚ್.ಎಸ್. ಶಿವರಾಮು, ಸಹಾಯಕ ನಿರ್ದೇಶಕರಾದ ಶ್ರೀನಿವಾಸ್, ಮುಖಂಡರಾದ ಸಿ.ಕೆ. ಮಂಜುನಾಥ್, ಗ್ರಾಮದ ಹಾಗೂ ಸಮುದಾಯದ ಇನ್ನಿತರ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *