ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕುಂದು ಕೊರತೆಗಳನ್ನು ಆಲಿಸಿ ಅವರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಬೇಕು. ಇಲ್ಲವಾದಲ್ಲ್ಲಿ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ. ಎಲ್. ಮೂರ್ತಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಸಮಸ್ಯೆಗಳನ್ನು ಆಲಿಸುವ ಸಲುವಾಗಿಯೇ ನಾವು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಸಂಘ ಸಂಸ್ಥೆಗಳ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದೇವೆ. ಅದರಂತೆ ಇಂದು ಸಹ ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದಂತೆ ಸಂಘಟನೆಗಳ ಪ್ರತಿನಿಧಿಗಳು ಮುಖಂಡರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಅರಿತಿದ್ದೇವೆ ಎಂದರು.
ಮುಖ್ಯವಾಗಿ ಪರಿಶಿಷ್ಟರಿಗೆ ಜಮೀನು ಸಂಬಂಧ ಸಮಸ್ಯೆಗಳು ಸಾಕಷ್ಟು ಕೇಳಿ ಬಂದಿವೆ. ಹಲವರಿಗೆ ಸಾಗುವಳಿ ಚೀಟಿ ಕೊಟ್ಟಿಲ್ಲ. ಇನ್ನೂ ಹಲವರಿಗೆ ಸಾಗುವಳಿ ಚೀಟಿ ಇದ್ದರೂ ಭೂಮಿ ಇಲ್ಲ. ಸಾಕಷ್ಟು ಅರ್ಜಿ ಮನವಿಗಳು ಸಲ್ಲಿಕೆಯಾಗಿದ್ದರೂ ಇನ್ನೂ ಸಹ ಸಮಸ್ಯೆ ಬಗೆಹರಿದಿಲ್ಲ. ಭೂಮಿ ಹಕ್ಕು ಪತ್ರ ಕೊಡದಿರುವ ಬಗ್ಗೆ ಜನರು ನಮ್ಮ ಗಮನಕ್ಕೆ ತಂದಿದ್ದಾರೆ. ಈಗಾಗಲೇ 18 ಜಿಲ್ಲೆಗಳಲ್ಲಿ ಆಯೋಗ ಪ್ರವಾಸ ಮಾಡಿದೆ. ಈ ಎಲ್ಲ ಜಿಲ್ಲೆಗಳಲ್ಲಿ ವ್ಯಕ್ತವಾದ ಸಮಸ್ಯೆಗಳು ಒಂದೇ ಬಗೆಯದ್ದಾಗಿದೆ. ಹೀಗಾಗಿ ಇನ್ನೂ 15 ದಿನಗಳೊಳಗೆ ಭೂಮಿ ಹಕ್ಕಿನ ಸಂಬಂಧ 18 ಜಿಲ್ಲೆಗಳಲ್ಲಿ ವ್ಯಕ್ತವಾಗಿರುವ ಮನವಿಗೆ ಸಂಬಂಧಿಸಿದಂತೆ ವರದಿ ಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡಗಳಿಗೆ ಪ್ರತ್ಯೇಕ ಸ್ಮಶಾನ ಬೇಕು ಎನ್ನುವುದು ಮುಖ್ಯ ಬೇಡಿಕೆಯಾಗಿದೆ. ಹೀಗಾಗಿ ಸೂಕ್ಷ್ಮ ರೆವಿನ್ಯೂ ಗ್ರಾಮಗಳನ್ನು ಗುರುತಿಸಿ ಮೂಲ ಸೌಕರ್ಯಗಳನ್ನೊಳಗೊಂಡ ಸ್ಮಶಾನ ಭೂಮಿ ಮಂಜೂರು ಮಾಡಬೇಕು. ಈ ಸಂಬಂಧ ಆಯೋಗವು ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತ ರಕ್ಷಣಾ ಸಮಿತಿ ಸಭೆಯನ್ನು ನಿಯಮಾನುಸಾರ ಕಾಲಕಾಲಕ್ಕೆ ಮಾಡಲಾಗುತ್ತಿಲ್ಲ ಎಂಬ ದೂರುಗಳು ಬಂದಿವೆ. ಅಧಿಕಾರಿಗಳಿಗೆ ನಿಗದಿತ ಸಮಯಕ್ಕೆ ಸಭೆ ಮಾಡಲು ಸೂಚನೆ ನೀಡಲಾಗುತ್ತಿದೆ. ಆದಿವಾಸಿ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಬಾರದು. ಈ ವಿಚಾರವಾಗಿಯೂ ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿವೇತನ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕಾಗಿಯೇ ಸಿಂಗಲ್ ವಿಂಡೊ ವ್ಯವಸ್ಥೆಯನ್ನು ಜಾರಿಗೆ ತಂದು ಶೀಘ್ರ ಸೌಲಭ್ಯ ತಲುಪಿಸಲು ತಿಳಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಪರಿಶಿಷ್ಟರ ಸಹಕಾರಿ ಸದಸ್ಯರಿಗೆ ಸಹಕಾರ ಇಲಾಖೆ ಮೂಲಕ ಉಚಿತವಾಗಿ ಹಣ ಪಾವತಿಸಿ ಸದಸ್ಯತ್ವಕ್ಕೆ ಕ್ರಮ ವಹಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳು ಗುತ್ತಿಗೆಯಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಸೂಚಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟ ಅನುದಾನ ಡೂಪ್ಲಿಕೇಷನ್ ಆಗಬಾರದೆಂಬ ಉದ್ದೇಶದಿಂದ ಈ ಎಸ್.ಸಿ.ಪಿ, ಟಿ.ಎಸ್.ಪಿ ಹಣದಲ್ಲಿ ನಿರ್ವಹಿಸಲಾದ ಕಾಮಗಾರಿ ಸ್ಥಳದಲ್ಲಿ ನಾಮಫಲಕಗಳನ್ನು ಅಳವಡಿಸಲು ಸೂಚಿಸಿದ್ದೇವೆ. ಪೌರಕಾರ್ಮಿಕರಿಗೆ ಮೂಲ ಸೌಕರ್ಯ, ಆರೋಗ್ಯ ರಕ್ಷಣೆ, ನಿವೇಶನಕ್ಕೆ ಕ್ರಮ ವಹಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಎಸಗಿದ ಹಿನ್ನೆಲೆಯಲ್ಲಿ ಚಾಮರಾಜನಗರ ತಾಲೂಕಿನ ಮಸಣಾಪುರ, ಹೊಂಗನೂರು ಗ್ರಾಮಕ್ಕೆ ಇಂದು ಭೇಟಿ ನೀಡಲಾಗಿದೆ. ಮೊದಲಿನಿಂದಲೂ ಎಲ್ಲ ಸಮುದಾಯಗಳು ಅನೂನ್ಯತೆಯಿಂದ ಬದುಕುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇಲ್ಲಿ ನಡೆದಿರುವ ಅಹಿತಕರ ಘಟನೆಗಳು ಮತ್ತೆ ಮರುಕಳಿಸಬಾರದು. ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಬೇಕು. ಎಲ್ಲ ಸಮುದಾಯಗಳು ಸೌಹಾರ್ದತೆಯಿಂದ ಬಾಳ್ವೆ ನಡೆಸಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ. ಎಲ್. ಮೂರ್ತಿ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರಾದ ಎಂ. ಕುಂಬಯ್ಯ, ಎನ್. ದಿವಾಕರ್, ಗೀತಾ ಥಾಂವಶಿ, ಕಾರ್ಯದರ್ಶಿಗಳಾದ ಡಾ. ಹೆಚ್.ಎಸ್. ಶಿವರಾಮು, ಸಹಾಯಕ ನಿರ್ದೇಶಕರಾದ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಇದಕ್ಕೂ ಮೊದಲು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ. ಎಲ್. ಮೂರ್ತಿ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಂಘ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಅಹವಾಲು ಸ್ವೀಕರಿಸಿದರು.
ಆಯೋಗದ ಸದಸ್ಯರಾದ ಎಂ. ಕುಂಬಯ್ಯ, ಎನ್. ದಿವಾಕರ್, ಗೀತಾ ಥಾಂವಶಿ, ಕಾರ್ಯದರ್ಶಿಗಳಾದ ಡಾ. ಹೆಚ್.ಎಸ್. ಶಿವರಾಮು, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ಸಮುದಾಯದ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Related