ಚಾಮರಾಜನಗರ : ಕನ್ನಡ ನಾಡು-ನುಡಿ, ಜಲ, ಭಾಷೆಗೆ ಹೋರಾಟ ನಡೆಸುವ ಹೋರಾಟಗಾರರು ಹಾಗೂ ಕಲಾವಿದರಿಗೆ ಡಾ. ರಾಜಕುಮಾರ್ ದೇವರಿದ್ದಂತೆ. ಕನ್ನಡಿಗರ ಸಾರ್ವಭೌಮ ವರನಟ ಡಾ. ರಾಜಕುಮಾರ್ ಮರೆಯಲಾಗದ ವ್ಯಕ್ತಿತ್ವ ಎಂದು ಹಿರಿಯ ಕನ್ನಡ ಚಳುವಳಿಗಾರ ಶಾ. ಮುರಳಿ ತಿಳಿಸಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ. ರಾಜಕುಮಾರ್ ಜನ್ಮದಿನ ಹಾಗೂ ಅವರ ಕೊಡುಗೆಗಳ ಕುರಿತು ಮಾತನಾಡುತ್ತಾ ಕೋಟ್ಯಾಂತರ ಕನ್ನಡಿಗರಿಗೆ ಹಾಗೂ ಕಲೆಯನ್ನು ಪ್ರೀತಿಸುವ ಜನತೆಗೆ ಡಾ.ರಾಜಕುಮಾರ್ ಅವರು ಸದಾ ಕಾಲ ಸ್ಪೂರ್ತಿದಾಯಕರು. ರಾಜಕುಮಾರ್ ಅವರು ಜಗತ್ತು ಕಂಡ ಅದ್ಭುತ ನಟ. ಅವರ ವಿನಯ, ಸರಳತೆ, ಸೌಜನ್ಯ, ಪ್ರೀತಿ ವಿಶ್ವಾಸ ಕನ್ನಡಿಗರಿಗೆ ಬಹುದೊಡ್ಡ ಶಕ್ತಿ ಎಂದು ತಿಳಿಸಿ ಕನ್ನಡ ಚಲನಚಿತ್ರರಂಗ ಇಡೀ ಭಾರತ ಚಿತ್ರರಂಗಕ್ಕೆ ಅಮೂಲ್ಯವಾದ ಚಲನಚಿತ್ರಗಳನ್ನು ರಾಜಕುಮಾರ್ ರವರ ಮೂಲಕ ನೀಡಿದೆ. ಕನ್ನಡದ ಜ್ವಲಂತ ಸಮಸ್ಯೆಯಾಗಿದ್ದ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಲಕ್ಷಾಂತರ ಕನ್ನಡಿಗ ಹೋರಾಟಗಾರರನ್ನು ಸೃಷ್ಟಿಸಿದವರು. ನಾಡು ನುಡಿ ಜಲ ಭಾಷೆಯ ವಿಚಾರದಲ್ಲಿ ಯಾವುದೇ ರಾಜಿಯಾಗದ ಏಕೈಕ ಶ್ರೇಷ್ಠ ವ್ಯಕ್ತಿ ರಾಜಕುಮಾರ್ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಡಾ. ರಾಜಕುಮಾರ್ ಅವರು ವಿಶ್ವ ಶ್ರೇಷ್ಠ ನಟರು ಅವರ ಅಭಿನಯ ಮರೆಯಲಾಗದು. ಅವರ ಚಲನಚಿತ್ರದ ವಿಷಯಗಳು, ನಟನೆ ಜೀವಂತಿಕೆಯ ಪ್ರತೀಕವಾಗಿತ್ತು. ಚಾಮರಾಜನಗರ ವೆಂದರೆ ರಾಜಕುಮಾರ್ ಅವರಿಗೆ ಸ್ವರ್ಗದ ಬಾಗಿಲಾಗಿತ್ತು. ಕನ್ನಡ ಚಿತ್ರರಂಗವನ್ನು ಸದಾ ಕಾಲ ಪ್ರೀತಿಸಿದ ರಾಜಕುಮಾರ ಅವರು ಶಾಶ್ವತವಾಗಿ ಹೃದಯದಲ್ಲಿ ನೆಲೆಸಿದ್ದಾರೆ. ರಾಜಕುಮಾರ ಅವರ ಚಲನಚಿತ್ರದಿಂದ ಸ್ಪೂರ್ತಿಗೊಂಡ ಲಕ್ಷಾಂತರ ಜನರು ಉತ್ತಮ ಮಾರ್ಗವನ್ನು, ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಮಾಜಕ್ಕೆ ಅರ್ಪಿಸಿಕೊಂಡಿದ್ದಾರೆ. ಇವರನ್ನು ಸ್ಮರಿಸುವುದು ಕನ್ನಡ ಸಾಹಿತ್ಯ ಪರಿಷತ್ತಿಗೆ ಹಾಗೂ ಕನ್ನಡಿಗರಿಗೆ ಸದಾ ಗೌರವ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮ ಪುರುಷೋತ್ತಮ್ ಮಾತನಾಡಿ ರಾಜಕುಮಾರ ಅವರ ನಡೆ-ನುಡಿ ಅವರ ಚಲನಚಿತ್ರಗಳು ತುಂಬಾ ಪ್ರಭಾವಶಾಲಿಯಾಗಿದೆ. ಮಹಿಳೆಯರಿಗೆ ನೀಡುತ್ತಿದ್ದ ಗೌರವ ಅಪಾರ. ಅವರ ಎಲ್ಲಾ ಚಲನಚಿತ್ರಗಳಲ್ಲೂ ಉತ್ತಮ ಕಥೆ, ಸಂಭಾಷಣೆ, ಹಾಡು ಮೌಲ್ಯಗಳಿಂದ ಕೂಡಿದೆ ಎಂದು ತಿಳಿಸಿ ರಾಜಕುಮಾರ್ ಚಾಮರಾಜನಗರದ ಜನತೆಗೆ ತುಂಬಾ ಹತ್ತಿರದ ವ್ಯಕ್ತಿಯಾಗಿದ್ದವರು ಎಂದು ತಿಳಿಸಿದರು.
ಹಿರಿಯ ಕನ್ನಡ ಚಳುವಳಿಗಾರ ರಾಜಗೋಪಾಲ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು. ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್ ಕಹಳೆ ರಾಜಕುಮಾರ್ ಕುರಿತು ಕವನವನ್ನು ವಾಚಿಸಿದರು. ಡಾ. ರಾಜಕುಮಾರ್ ಅವರ ಗೀತ ಗಾಯನವನ್ನು ಏರ್ಪಡಿಸಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಬಿಕೆ ಆರಾಧ್ಯ,ಸುರೇಶ್ ಗೌಡ, ಸರಸ್ವತಿ,ಗೀತಾ, ಲಕ್ಷ್ಮೀನರಸಿಂಹ, ವಿಜಯ ಲಕ್ಷ್ಮಿ, ಅರುಣ್ ಮುಂತಾದವರು ಉಪಸ್ಥಿತರಿದ್ದರು