ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೇಂದ್ರ ಉನ್ನತ ಮಟ್ಟದ ಅಧಿಕಾರಿಗಳ ತಂಡದಿಂದ ಬರ ಅಧ್ಯಯನ : ವಾಸ್ತವ ಪರಿಸ್ಥಿತಿ ಅವಲೋಕನ

ಚಾಮರಾಜನಗರ: ಜಿಲ್ಲೆಯ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಆಗಮಿಸಿರುವ ಕೇಂದ್ರದ ವಿವಿಧ ಸಚಿವಾಲಯಗಳ ಉನ್ನತ ಮಟ್ಟದ ಅಧಿಕಾರಿಗಳ ತಂಡವು (ಐಎಂಸಿಟಿ) ಇಂದು ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರದ ವಾಸ್ತವ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿತು. 

ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಉಪ ಆಯುಕ್ತರಾದ ಡಾ. ಸುಧಾಮ್ ಬೇಗ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಸಲಹೆಗಾರರಾದ ಆಶೀಶ್ ಪಾಂಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಮಹಾಲನೋಬಿಸ್ ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರ (ಎಂಎನ್‍ಸಿಎಫ್‍ಸಿ)ದ ಉಪನಿರ್ದೇಶಕರಾದ ಕರಣ್ ಚೌಧರಿ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿಯನ್ನು ಅವಲೋಕಿಸಿತು.

ಚಾಮರಾಜನಗರ ತಾಲೂಕಿನ ಕೆರೆಹಳ್ಳಿ ಗ್ರಾಮದ ರೈತರಾದ ಮಾದಪ್ಪ ಎಂಬುವರಿಗೆ ಸೇರಿದ ಜಮೀನಿಗೆ ಭೇಟಿ ನೀಡಿ ಒಣಗಿದ ಜೋಳದ ಬೆಳೆಯನ್ನು ಅಧಿಕಾರಿಗಳ ತಂಡ ವೀಕ್ಷಿಸಿದರು. ಇದೇ ವೇಳೆ ಹಾಜರಿದ್ದ ರೈತರೊಂದಿಗೆ ಅಧಿಕಾರಿಗಳು ಮಾತನಾಡಿ ಬೆಳೆ ನಷ್ಟ, ಬಿತ್ತನೆ ಸಂಬಂಧ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಭಾನುಪ್ರಕಾಶ್ ಅವರು ಸ್ಥಳೀಯ ಬೆಳೆ ಹಾನಿ ಕುರಿತು ವಿವರ ಒದಗಿಸಿದರು.

ಸ್ಥಳೀಯ ರೈತರು ಮಾತನಾಡಿ ಈ ಭಾಗದಲ್ಲಿ ತೊಗರಿ, ಜೋಳ, ಕಬ್ಬು, ಹುರಳಿ, ಅರಿಶಿನ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಈ ಬಾರಿ ಮಳೆ ಕೊರತೆಯಿಂದ ಎಲ್ಲಾ ಬೆಳೆಗಳು ಒಣಗಿ ಹೋಗಿವೆ. ಬಿತ್ತನೆಗಾಗಿ ಎಕರೆಗೆ 30 ರಿಂದ 40 ಸಾವಿರ ಖರ್ಚು ಮಾಡಿದ್ದೇವೆ. ಬೆಳೆ ಹಾನಿಯಿಂದ ನಾವು ಸಂಕಷ್ಟದಲ್ಲಿದ್ದೇವೆ. ನಮಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಬಳಿಕ ಅಧಿಕಾರಿಗಳ ತಂಡ ಮಲೆಯೂರಿನ ಕನಕಗಿರಿ ಜೈನ ಗೋ ಶಾಲೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಅಲ್ಲಿನ ಗೋಶಾಲೆ ನಿರ್ವಹಣೆ ಸಂಬಂಧ ವಿವರ ಪಡೆದರು. ಸಮೀಪದಲ್ಲಿಯೇ ದಾಸ್ತಾನು ಮಾಡಲಾಗಿದ್ದ ಮೇವು ಸಂಗ್ರಹವನ್ನು ವೀಕ್ಷಿಸಿದರು.

ಕುಲಗಾಣ ಗ್ರಾಮಕ್ಕೆ ಭೇಟಿ ನೀಡಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಅಲ್ಲಿನ ಸರ್ಕಾರಿ ಕೆರೆಯಲ್ಲಿ ನಿರ್ವಹಿಸಲಾಗುತ್ತಿದ್ದ ಕೆರೆ ಹೂಳೆತ್ತುವ ಕೆಲಸವನ್ನು ಪರಿಶೀಲಿಸಿದರು. ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರೊಂದಿಗೆ ಸಮಾಲೋಚಿಸಿದರು. ಕೆರೆ ಎಷ್ಟು ವರ್ಷದಿಂದ ನೀರಿಲ್ಲದೆ ಒಣಗಿದೆ ಎಂದು ಪ್ರಶ್ನಿಸಿದರು. ಗ್ರಾಮಸ್ಥರು ಕಳೆದ ಎರಡು ವರ್ಷದಿಂದ ಕೆರೆಗೆ ನೀರಿಲ್ಲ ಎಂದರು.

ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮಕ್ಕೆ ತೆರಳಿ ಲೋಕೇಶ್ವರಿ, ನಾಗರಾಜು ಎಂಬುವರಿಗೆ ಸೇರಿದ ಜಮೀನಿನಲ್ಲಿ ನೀರಿಲ್ಲದೆ ಒಣಗಿ ಹೋಗಿದ್ದ ಸೂರ್ಯಕಾಂತಿ ಬೆಳೆಯನ್ನು ವೀಕ್ಷಿಸಿದರು. ಸ್ಥಳೀಯ ರೈತರು ಅಧಿಕಾರಿಗಳ ತಂಡದ ಮುಂದೆ ತಮ್ಮ ಕುಂದು ಕೊರತೆಗಳನ್ನು ನಿವೇದಿಸಿಕೊಂಡರು. ನೀರಿಲ್ಲದೆ ನಾವು ಹಾಕಿದ್ದ ಬೆಳೆ ಕೈಸೇರಿಲ್ಲ. ಈ ಭಾಗದಲ್ಲಿ ಮಳೆಯನ್ನೇ ಆಶ್ರಯಿಸಿ ಬಿತ್ತನೆ ಮಾಡಿದ್ದು ಫಸಲು ಬಂದಿಲ್ಲ. ಕುಡಿಯುವ ನೀರು, ಜಾನುವಾರುಗಳ ಮೇವಿಗೂ ಸಹ ತೊಂದರೆಯಾಗಿದೆ. ಹೀಗಾಗಿ ನಾವು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ನಮಗೆ ಹೆಚ್ಚಿನ ಪರಿಹಾರ ದೊರಕಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದ ಕೃಷಿ ವಿಜ್ಞಾನ ಕೇಂದ್ರದ ಡಾ. ಶೃತಿ ಅವರು ಈ ಹಿಂದಿನ ಸಾಲಿನಲ್ಲಿ ಸಮರ್ಪಕವಾಗಿ ಮಳೆಯಾಗಿತ್ತು. ಈ ಬಾರಿ ಮಳೆಯ ಅಭಾವದಿಂದ ಹೆಚ್ಚಿನ ಬೆಳೆ ನಷ್ಟವಾಗಿದೆ ಎಂದು ವಿವರಿಸಿದರು.

ಬಳಿಕ ಗುಂಡ್ಲುಪೇಟೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರು ಮಳೆ, ಬೆಳೆ, ಕುಡಿಯುವ ನೀರು, ಜಾನುವಾರುಗಳ ಮೇವು ಸೇರಿದಂತೆ ಜಿಲ್ಲೆಯು ಎದುರಿಸುತ್ತಿರುವ ಬರ ಪರಿಸ್ಥಿತಿಯ ಸಂಪೂರ್ಣ ವಿವರವನ್ನು ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ವಿಬಿ ಜಿ ರಾಮ್ ಜಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವಿವರ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ತಂಡಕ್ಕೆ ಮಾಹಿತಿ ಒದಗಿಸಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಗಿರೀಶ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಮಾನ್ಯುವೆಲ್ ಸಂತೋಷ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸುರೇಖಾ, ನಬಾರ್ಡ್ ಅಧಿಕಾರಿ ಹಿತಾ ಸುವರ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *