ಶ್ರಮದಾನದ ಮೂಲಕ ಪರಿಸರ ಜಾಗೃತಿ ಸಂದೇಶ

  • ಚಾಮರಾಜನಗರ ವಿ.ವಿ. ಯ ಎನ್‍ಎಸ್‍ಎಸ್ ಘಟಕದಿಂದ ವಿಶ್ವ ಪರಿಸರ ದಿನಾಚರಣೆ
ಚಾಮರಾಜನಗರ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಹಾಗೂ ಕುಲಸಚಿವರಾದ ಪ್ರೊ. ಕೆ.ಎಂ. ಮಹದೇವನ್ ಸಮ್ಮುಖದಲ್ಲಿ ಅರ್ಥಪೂರ್ಣ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮ ನಡೆಯಿತು. 

ವಿಶ್ವವಿದ್ಯಾನಿಲಯದ ಆವರಣದಲ್ಲಿ ದೇಸಿ ತಳಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು. ಹಸಿರು ಪರಿಸರ ನಿರ್ಮಾಣ ಹಾಗೂ ಜೀವವೈವಿಧ್ಯ ಸಂರಕ್ಷಣೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಗಿಡ ನೆಟ್ಟ ಬಳಿಕ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ನಿರ್ಮಾಣ, ನೀರು ಹಾಗೂ ವಿದ್ಯುತ್ ಸಂರಕ್ಷಣೆ, ಹಸಿರು ಸಂಪತ್ತಿನ ವೃದ್ಧಿಗೆ ಬದ್ಧರಾಗಿರುವ ಸಂಕಲ್ಪವನ್ನು ಕೈಗೊಳ್ಳಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಅವರು ಚಾಮರಾಜನಗರ ಜಿಲ್ಲೆಯು ಸಮೃದ್ಧ ಅರಣ್ಯ ಸಂಪತ್ತು ಮತ್ತು ಜೀವವೈವಿಧ್ಯತೆಯಿಂದ ಕೂಡಿದೆ. ವಿಶ್ವವಿದ್ಯಾನಿಲಯವನ್ನು ಮಾದರಿ ಹಸಿರು ಕ್ಯಾಂಪಸ್ ಆಗಿ ರೂಪಿಸುವ ಅಗತ್ಯವಿದ್ದು ಈ ಕಾರ್ಯಕ್ಕೆ ಎಲ್ಲರು ಕೈಜೋಡಿಸಬೇಕು ಎಂದರು. 

ಕುಲಸಚಿವರಾದ ಪ್ರೊ ಕೆ.ಎಂ. ಮಹದೇವನ್ ಅವರು ಪರಿಸರ ಸ್ನೇಹಿ ಆಡಳಿತ ವ್ಯವಸ್ಥೆ, ಕಾಗದ ರಹಿತ ಕಚೇರಿ ಹಾಗೂ ಪ್ಲಾಸ್ಟಿಕ್ ಬಳಕೆ ನಿಯಂತ್ರಣದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿ.ವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಂ. ನಂಜಯ್ಯ ಹೊಂಗನೂರು, ಚಾಮರಾಜನಗರ ವಿವಿ ಯ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ ಕೃಷ್ಣಮೂರ್ತಿ ಹನೂರು, ಪ್ರಾಂಶುಪಾಲರಾದ ಥಿಯೋಡರ್ ಲೂಥರ್, ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಆರ್. ಮಹೇಶ್, ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎನ್.ಎಸ್.ಎಸ್. ಸ್ವಯಂ ಸೇವಕರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಶ್ರಮದಾನ ನಡೆಸಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಪರಿಸರ ಜಾಗೃತಿ ಸಂದೇಶವನ್ನು ಸಾರಲಾಯಿತು.

Leave a Reply

Your email address will not be published. Required fields are marked *