ಸಂವಿಧಾನದಿಂದಾಗಿ ಎಲ್ಲರಿಗೂ ಸಾಮಾಜಿಕ ನ್ಯಾಯ ಲಭಿಸಿದೆ: ಶಾಸಕ ಎಂ.ಆರ್. ಮಂಜುನಾಥ್

ಹನೂರು: ದೇಶ ಸ್ವತಂತ್ರವಾದ ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಶ್ವದ ವಿವಿಧ ಪ್ರಜಾಪ್ರಭುತ್ವ ರಾಷ್ಟ್ರಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ, ದೂರದೃಷ್ಟಿಯಿಂದ ಭಾರತಕ್ಕೆ ಅತ್ಯುತ್ತಮ ಲಿಖಿತ ಸಂವಿಧಾನವನ್ನು ನೀಡಿದ್ದಾರೆ. ಆ ಸಂವಿಧಾನದಿಂದಾಗಿಯೇ ಇಂದು ಎಲ್ಲ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ದೊರಕುತ್ತಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಧಾನಸಭೆ ಹಾಗೂ ಸಂಸತ್ತಿನ ಕಲಾಪಗಳು ಹೇಗೆ ನಡೆಯುತ್ತವೆ, ಸಭಾಧ್ಯಕ್ಷರು, ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಮತ್ತು ಶಾಸಕರು ಹೇಗೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ. ತಾಲ್ಲೂಕು ಮಟ್ಟದಲ್ಲಿ ಆಯೋಜಿಸಿರುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಉತ್ತಮ ಅನುಭವ ಮತ್ತು ಜ್ಞಾನವನ್ನು ನೀಡುತ್ತವೆ ಎಂದರು.

ಡಾ. ಅಂಬೇಡ್ಕರ್ ಅವರು ಏಕಾಏಕಿ ಮಹಾನ್ ವ್ಯಕ್ತಿಯಾಗಲಿಲ್ಲ, ಹಲವು ವರ್ಷಗಳ ಪರಿಶ್ರಮದಿಂದ ಸಂವಿಧಾನ ರಚನೆಯಾಗಿದೆ. ಅದರ ಹಿಂದೆ ಅವರ ಅಪಾರ ಪರಿಶ್ರಮ, ನಿರಂತರ ಅಧ್ಯಯನ ಮತ್ತು ತ್ಯಾಗವಿದೆ. ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಕಡ್ಡಾಯವಾಗಿ ಓದಬೇಕು. ಸಾಧಕರ ಬಾಲ್ಯದ ಬದುಕು ಮತ್ತು ಅವರ ಚಿಂತನೆಗಳು ನಿಮ್ಮ ಚಿಂತನೆಯೊಂದಿಗೆ ಎಲ್ಲೋ ಒಂದು ಕಡೆ ಸಂಬಂಧ ಬೆಸೆಯುತ್ತದೆ. ನಿಮ್ಮ ಮನಸ್ಸಿನಲ್ಲಿರುವ ಗುರಿಯ ಕಡೆಗೆ ದೃಢವಾಗಿ ಸಾಗಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾವು ಮೊದಲ ಬಾರಿಗೆ ಈ ಕ್ಷೇತ್ರಕ್ಕೆ ಬಂದಾಗ ಇಲ್ಲಿನ ಭೌಗೋಳಿಕ ಪರಿಸ್ಥಿತಿಯನ್ನು ಕಂಡು ಹಿಂಜರಿಯುವಂತಾಗಿತ್ತು. ಆದರೆ ಕಷ್ಟಕ್ಕೆ ಹೆದರಿ ಓಡಿ ಹೋದರೆ ಯಾವುದೇ ಪ್ರಯೋಜನವಿಲ್ಲ, ಇದ್ದಲ್ಲೇ ಇದ್ದು ಸಾಧನೆ ಮಾಡಬೇಕು ಎಂಬ ದೃಢ ನಿರ್ಧಾರ ಕೈಗೊಂಡೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ತಂದೆ-ತಾಯಿಯ ಪರಿಶ್ರಮವನ್ನು ಅರ್ಥಮಾಡಿಕೊಳ್ಳಬೇಕು. ಅವರು ಕೃಷಿ, ಹೈನುಗಾರಿಕೆ, ಕೂಲಿ ಕೆಲಸ ಮಾಡಿ ಒಂದೊಂದೇ ರೂಪಾಯಿಯನ್ನು ಕೂಡಿಟ್ಟು ನಿಮ್ಮ ಶಿಕ್ಷಣಕ್ಕಾಗಿ ವ್ಯಯಿಸುತ್ತಿದ್ದಾರೆ. ನೀವು ಸ್ವಾವಲಂಬಿಗಳಾಗಿ ನಿಂತು ‘ನಾನಿದ್ದೇನೆ, ನಿಮ್ಮ ಜವಾಬ್ದಾರಿಯನ್ನು ನಾನು ನೋಡಿಕೊಳ್ಳುತ್ತೇನೆ’ ಎಂದು ಹೇಳಿದಾಗ ಮಾತ್ರ ಅವರ ತ್ಯಾಗಕ್ಕೆ ನಿಜವಾದ ಸಾರ್ಥಕತೆ ದೊರೆಯುತ್ತದೆ. ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಅದನ್ನು ಸಕಾರಾತ್ಮಕವಾಗಿ ಬಳಸಿಕೊಂಡು ನಿಮ್ಮ ಗುರಿಯತ್ತ ಸಾಗಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಭಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಗ್ರೇಡ್-2 ತಹಸೀಲ್ದಾರ್ ಪ್ರಕಾಶ್, ಪ್ರಾಂಶುಪಾಲರಾದ ಚಂದ್ರಮ್ಮ, ಬಿಆರ್‌ಸಿ ವೆಂಕಟೇಶ್, ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *