ಪ್ರತಿಯೊಬ್ಬರು ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಳ್ಳಿ : ಜಿಲ್ಲಾಧಿಕಾರಿ ಶ್ರೀರೂಪ

ಚಾಮರಾಜನಗರ: ಪ್ರತಿನಿತ್ಯ 5ರಿಂದ 10 ನಿಮಿಷಗಳ ಕಾಲ ಯೋಗ, ಧ್ಯಾನ ಮಾಡುವ ಮೂಲಕ ಪ್ರತಿಯೊಬ್ಬರು ಯೋಗವನ್ನು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸಲಹೆ ಮಾಡಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿಂದು ಆಯುಷ್ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುμï ಇಲಾಖೆ, ಗೃಹ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ, ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳು, ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿ, ಮೈ ಭಾರತ್ ಕೇಂದ್ರ ಹಾಗೂ ಯೋಗ ನಿರತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ 12ನೇ “ಅಂತರಾಷ್ಟ್ರೀಯ ಯೋಗ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.  

   ಯೋಗ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ನವಚೈತನ್ಯ ತುಂಬುವ ಮೂಲಕ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸದೃಢತೆ, ವಿಕಸನಕ್ಕೆ ಪೂರಕ ಶಕ್ತಿ ಒದಗಿಸಲಿದೆ. ಮಾನಸಿಕ ಜಂಜಾಟ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಯೋಗ ಸಹಕಾರಿ. ಯೋಗ ದಿನದಂದು ಮಾತ್ರ ಯೋಗ ಮಾಡುವುದಲ್ಲ, ಮಕ್ಕಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಎಲ್ಲರನ್ನು ಯೋಗಭ್ಯಾಸಕ್ಕೆ ಪ್ರೋತ್ಸಾಹಿಸಲು ಹಾಗೂ ಚಿಕ್ಕವರಿಂದ ವೃದ್ಧರವರೆಗೂ ಯೋಗದ ಜಾಗೃತಿ ಮೂಡಿಸಲು ಈ ಬಾರಿ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಘೋಷವಾಕ್ಯ ರೂಪಿಸಲಾಗಿದೆ ಎಂದರು.

   ಇಂದು ದೇಶದ ಪ್ರತಿಷ್ಠಿತ ವ್ಯಕ್ತಿಗಳು ಸಹ ಜಿಮ್ ಬಿಟ್ಟು ಯೋಗಕ್ಕೆ ಒಲವು ತೋರುತ್ತಿದ್ದಾರೆ. ಇತ್ತೀಚೆಗೆ ಪರೀಕ್ಷಾ ಒತ್ತಡ ತಾಳಲಾರದೇ ಇಂದು ಸಾಕಷ್ಟು ವಿದ್ಯಾರ್ಥಿಗಳು ಅತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.  ಎಸ್.ಎಸ್.ಎಲ್.ಸಿ, ನೀಟ್, ಜೆ.ಇ.ಇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡ ನಿವಾರಣೆಗಾಗಿ ದಿನನಿತ್ಯ ಕನಿಷ್ಠ 10 ನಿಮಿಷ ಯೋಗ ಮಾಡಿದರೇ ಸಾಕು, ಯಶಸ್ಸು ತಾನಾಗಿಯೇ ಒಲಿಯಲಿದೆ. ಒತ್ತಡ ನಿರ್ವಹಣೆಗೆ ಪರ್ಯಾಯ ಮಾರ್ಗವೇ ಪರಿಣಾಮಕಾರಿ ಯೋಗವಾಗಿದೆ. ಪ್ರತಿಯೊಬ್ಬರು ಒತ್ತಡಮುಕ್ತರಾಗಲು ಯೋಗವನ್ನು ದೈನಂದಿನ ಜೀವನ ಒಂದು ಭಾಗವಾಗಿ ಅಭ್ಯಾಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

   ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್ ಅವರು ಮಾತನಾಡಿ ಯೋಗಕ್ಕೆ ಸಾಕಷ್ಟು ಬಗೆಯ ಪರಿಕಲ್ಪನೆಗಳಿವೆ. ಪೂಜೆ ಮಾಡಿದರೆ ಅದು ಭಕ್ತಿಯೋಗ, ಭೌತಿಕವಾಗಿ ದೇಹ ದಂಡಿಸಿದರೆ ಅದು ಹಠಯೋಗ, ನಿಷ್ಠೆಯಿಂದ ಕಾಯಕ ಮಾಡಿದರೆ ಅದು ಕರ್ಮಯೋಗ, ಹೀಗೆ ದೈನಂದಿನ ಜೀವನದಲ್ಲಿ ನಾವು ಯೋಗಕ್ಕೆ ಶರಣಾಗಿದ್ದೇವೆ. ಮನುಷ್ಯ ಆರೋಗ್ಯಯುತ ಜೀವನ ನಡೆಸಲು ತೋಳ್ಬಲ, ಆತ್ಮಬಲ, ಮನೋಬಲ ಬೇಕು. ಈ ತೋಳ್ಬಲ ಹಾಗೂ ಮನೋಬಲ ವೃದ್ಧಿಗೆ ಯೋಗ ಬೇಕೇಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಸಾಧಿಸಲು ಯೋಗ ಅತ್ಯಂತ ಅವಶ್ಯಕವಾಗಿದೆ. ಯೋಗ ದೇಹವನ್ನು ಹಾಗೂ ಧ್ಯಾನ ಮನಸ್ಸನ್ನು ನಿಯಂತ್ರಿಸಲಿದೆ. ಪ್ರತಿಯೊಬ್ಬರು ಯೋಗದ ಮಹತ್ವ ಅರಿತು, ಇತರರಿಗೂ ತಿಳಿಸಬೇಕು ಎಂದರು.   

   ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ಜಿಲ್ಲಾ ಆಯುμï ಅಧಿಕಾರಿ ಡಾ. ಬಿ.ಪಿ. ಸತೀಶ್‍ಕುಮಾರ್, ಆಯುಷ್ ವೈದ್ಯಾಧಿಕಾರಿ ಪುನೀತ್ ಬಾಬು, b ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪಾಟೀಲ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

   ವೇದಿಕೆ ಕಾರ್ಯಕ್ರಮದ ಬಳಿಕ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಮೈಸೂರಿನ ಆಯುಷ್ ಪ್ರಕೃತಿ ಚಿಕಿತ್ಸಾಲಯದ ವೈದ್ಯರಾದ ಡಾ. ಮನೋಜ್, ವಿದ್ಯಾರ್ಥಿಗಳಾದ ಗಗನ್, ರಜತ್ ಅವರುಗಳು ವಿವಿಧ ಆಯಾಮದ ಯೋಗಭಂಗಿಗಳನ್ನು ಪ್ರದರ್ಶಿಸಿ ಪ್ರಸ್ತುತಪಡಿಸಿದರು. ಜಿಲ್ಲಾಧಿಕಾರಿ ಶ್ರೀರೂಪ ಸೇರಿದಂತೆ ಗಣ್ಯರು, ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಸಂಘಸಂಸ್ಥೆ ಪದಾಧಿಕಾರಿಗಳು, ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

Leave a Reply

Your email address will not be published. Required fields are marked *