- ನೀರಿನ ಸುಸ್ಥಿರ ಬಳಕೆ ಕುರಿತ ವಿಚಾರ ಸಂಕೀರ್ಣ
ಚಾಮರಾಜನಗರ: ಜೀವಜಲ ಸಂರಕ್ಷಣೆ ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ ಎಂದು ರೋಟರಿ ಕ್ಲಬ್ ಆಫ್ ಮೈಸೂರು ಮಾಜಿ ಅಧ್ಯಕ್ಷರು,ದಕ್ಷಿಣ ಏಷ್ಯಾ ವಿಭಾಗದ ESRAG” (ಪರಿಸರ ಸುಸ್ಥಿರತೆಗಾಗಿನ ರೋಟರಿ ಕ್ರಿಯಾ ಗುಂಪು) ವೆಸ್ಟ್ ಅಧ್ಯಕ್ಷ ರೋಟೇರಿಯನ್ ಸಿ.ಆರ್. ಹನುಮಂತು ಹೇಳಿದರು
ನಗರದ ರೋಟರಿ ಭವನದಲ್ಲಿ ನಡೆದ ರೋಟರಿ ಸಂಸ್ಥೆ ನೀರಿನ ಸುಸ್ಥಿರ ಬಳಕೆ ಕುರಿತ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀರು ಅತ್ಯಂತ ಅಮೂಲ್ಯವಾದದ್ದು.ನೀರು ಇಲ್ಲದೆ ಜೀವಸಂಕುಲದ ಉಳಿವಿಕೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಇಂದು ಜಾಗತಿಕ ತಾಪಮಾನ ಏರಿಕೆ, ನಗರೀಕರಣ ಮತ್ತು ನೀರಿನ ದುರುಪಯೋಗದಿಂದಾಗಿ ನೀರಿನ ಅಭಾವ ತೀವ್ರಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೈಜೋಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಜೀವಜಲವನ್ನು ಸಂರಕ್ಷಿಸಲು ಪ್ರತಿಯೊಂದು ಮನೆ, ಶಾಲೆ ಮತ್ತು ಕಚೇರಿಗಳಲ್ಲಿ ಮಳೆನೀರನ್ನು ಸಂಗ್ರಹಿಸಿ, ಭೂಗರ್ಭಕ್ಕೆ ಇಂಗಿಸುವ ವ್ಯವಸ್ಥೆ ಮಾಡಬೇಕು. ಇದು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅತ್ಯುತ್ತಮ ಮಾರ್ಗವಾಗಿದೆ. ದೈನಂದಿನ ಚಟುವಟಿಕೆಗಳಾದ ಹಲ್ಲುಜ್ಜುವುದು, ಪಾತ್ರೆ ತೊಳೆಯುವುದು ಹಾಗೂ ಸ್ನಾನ ಮಾಡುವಾಗ ನೀರನ್ನು ಅನಾವಶ್ಯಕವಾಗಿ ಹರಿಯಬಿಡಬಾರದು. ನಲ್ಲಿಗಳು
ಸೋರುತ್ತಿದ್ದರೆ ತಕ್ಷಣ ದುರಸ್ತಿ ಮಾಡಿಸಬೇಕು ಎಂದರು.
ಹೆಚ್ಚು ಹೆಚ್ಚು ಗಿಡಮರಗಳನ್ನು ನೆಡುವುದರಿಂದ ಮಳೆ ಪ್ರಮಾಣ ಹೆಚ್ಚುತ್ತದೆ ಮತ್ತು ಮಣ್ಣಿನ ತೇವಾಂಶ ಉಳಿಯುತ್ತದೆ. ರೈತರು ಸಾಂಪ್ರದಾಯಿಕ ನೀರಾವರಿ ಪದ್ಧತಿಯ ಬದಲು ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು. ಕಡಿಮೆ ನೀರಿನ ಬೆಳೆಗಳನ್ನು ಮಾಡುವ
ಮೂಲಕ ನೀರಿನ ಅಪವ್ಯಯ ತಡೆಯಬಹುದು.
ಜಲಮೂಲಗಳ ರಕ್ಷಣೆ: ಕೆರೆ, ನದಿ, ಬಾವಿಗಳಿಗೆ ಕಸ-ಕಡ್ಡಿ ಮತ್ತು ರಾಸಾಯನಿಕ ತ್ಯಾಜ್ಯಗಳನ್ನು ಎಸೆಯದೆ ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.ನೀರಿನ ಸಂರಕ್ಷಣೆ ಕೇವಲ ಸರ್ಕಾರ ಅಥವಾ ಸಂಘ-ಸಂಸ್ಥೆಗಳ ಜವಾಬ್ದಾರಿಯಲ್ಲ, ಅದು ನಮ್ಮೆಲ್ಲರ ನೈತಿಕ ಹೊಣೆಗಾರಿಕೆಯಾಗಿದೆ. ಜೀವಜಲವನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ ಮಾತನಾಡಿ, ಸಕಲ ಜೀವರಾಶಿಗಳು ನೀರಿನಿಂದಲೇ ಬದುಕುತ್ತವೆ. ಆ ಜೀವಜಲವೇ ಇಲ್ಲವಾದರೆ ಬದುಕು ದುಸ್ತರ. ಅಮೂಲ್ಯವಾದ ಜಲ ಸಂಪತ್ತನ್ನು ಹಿತ-ಮಿತವಾಗಿ ಉಪಯೋಗಿಸುವ ಕೆಲಸವನ್ನು ಎಲ್ಲರೂ ಮಾಡುವಂತಾಗಬೇಕು ಎಂದರು.
ಸಭೆಯಲ್ಲಿ ರೋಟರಿ ಸಂಸ್ಥಾಪಕ ಸದಸ್ಯ ಶ್ರೀನಿವಾಸಶೆಟ್ಟಿ, ಕಾರ್ಯದರ್ಶಿ ಅಂಕಶೆಟ್ಟಿ, ಕಾಳನಹುಂಡಿ ಗುರುಸ್ವಾಮಿ, ಪಿಡಿಜಿ ಡಾ.
ನಾಗಾರ್ಜುನ್, ಪದಾಧಿಕಾರಿಗಳು, ರೈತ ಮುಖಂಡರಾದ ಎ.ಎಂ.ಮಹೇಶ್ ಪ್ರಭು, ಹೊನ್ನೂರು ಪ್ರಕಾಶ್,ಸದಸ್ಯರು, ರೈತ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
