ಹನೂರು: ತಾಲೂಕಿನಾದ್ಯಂತ ತಡರಾತ್ರಿ ಸುರಿದ ಭಾರಿ ಮಳೆಗೆ ಜಲಮೂಲಗಳು ಮೈದುಂಬಿ ಹರಿಯುತ್ತಿದ್ದು, ಹನೂರು ಪಟ್ಟಣದ ಹಲವು ಬಡಾವಣೆಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಹನೂರು ಸುತ್ತಮುತ್ತಲಿನ ಹುಬ್ಬೆ ಹುಣಸೆ ಡ್ಯಾಂ ಸೇರಿದಂತೆ ಪ್ರಮುಖ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳು ತುಂಬಿ ತುಳುಕುತ್ತಿದ್ದು, ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಹನೂರು ಪಟ್ಟಣದಲ್ಲಿ ಹುಬ್ಬೆ ಹುಣಸೆ ಜಲಾಶಯ ಕೋಡಿ ಬಿದ್ದು ಯಥೇಚ್ಛ ನೀರು ಹರಿದು ಬರುತ್ತಿರುವ ಹಿನ್ನೆಲೆ ಹನೂರು ಪಟ್ಟಣದ ಮೂರು ವಾರ್ಡ್‌ಗಳಲ್ಲಿ ಸಂಪರ್ಕ ಕಡಿತವಾಗಿತ್ತು. ಮಾಹಿತಿ ತಿಳಿದ ಕೂಡಲೇ ಶಾಸಕ ಎಂ.ಆರ್. ಮಂಜುನಾಥ್ ಅವರು ಮಂಗಳವಾರ ಮುಂಜಾನೆಯೇ ಮಳೆಹಾನಿಗೊಳಗಾದ ಪ್ರದೇಶಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಲಾವೃತಗೊಂಡ ದೇವಾಂಗಪೇಟೆ, ಆಂಜನೇಯ ಬೀದಿ, ಮಠದ ಬೀದಿ, ಸೊಪ್ಪಿನಕೇರಿ ಬಡಾವಣೆಗಳಿಗೆ, ನೀರು ನುಗ್ಗಿರುವ ಮನೆಗಳು ಹಾಗೂ ತುಂಬಿ ಹರಿಯುತ್ತಿರುವ ಜಲಮೂಲಗಳ ಬಳಿ ತೆರಳಿ ಸ್ಥಳೀಯರಿಂದ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಶಾಸಕರು, “ಭಾರಿ ಮಳೆಯಿಂದಾಗಿ ಜಲಮೂಲಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದು ಒಂದೆಡೆ ಸಂತಸದ ವಿಚಾರವಾದರೂ, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿರುವುದು ಆತಂಕಕಾರಿ. ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಮಳೆ ನೀರು ನುಗ್ಗಿರುವ ಮನೆಗಳು ಹಾಗೂ ಹಾನಿಗೊಳಗಾದ ಪ್ರದೇಶಗಳ ಬಗ್ಗೆ ಅಧಿಕಾರಿಗಳು ಸಮಗ್ರ ವರದಿ ಪಡೆದು, ಜನರಿಗೆ ತೊಂದರೆಯಾಗದಂತೆ ತುರ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
“ಮಳೆಹಾನಿಗೊಳಗಾದ ಕುಟುಂಬಗಳಿಗೆ ತಕ್ಷಣ ಸ್ಪಂದಿಸಬೇಕು. ನೀರು ನುಗ್ಗಿರುವ ಕಡೆಗಳಲ್ಲಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳಬೇಕು. ಮಳೆಯ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಿ, ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು” ಎಂದು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
