- ಸಚಿವರಾದ ಸಿ.ಪುಟ್ಟರಂಗಶೆಟ್ಟಿ ನೇತೃತ್ವದ ಸಭೆಯಲ್ಲಿ ತೀರ್ಮಾನ
ಚಾಮರಾಜನಗರ: ನಗರದಲ್ಲಿ ಅಕ್ಟೋಬರ್ 17ರಿಂದ 19ರವರೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ದಸರಾ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ದಸರಾ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಸಚಿವರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಡಳಿತದ ವತಿಯಿಂದ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ನಗರದ ಪ್ರಮುಖ ಸ್ಥಳಗಳಲ್ಲಿ ವಿಶೇಷ ದೀಪಾಲಂಕಾರ, ರೈತ ದಸರಾ, ಮಹಿಳಾ ದಸರಾ, ಫಲಪುಷ್ಪ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ (ಚುಡಾ) ಅಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.