ಗುರು -ಬದುಕಿಗೆ ದಾರಿ, ಜೀವನಕ್ಕೆ ಜ್ಯೋತಿ. ಪ್ರತಿಯೊಬ್ಬರ ವ್ಯಕ್ತಿತ್ವವನ್ನು ರೂಪಿಸುವ ಮಹಾನ್ ಶಕ್ತಿ ಎಂದರೆ ಗುರು

ಡಾ. ಡಿ.ಸಿ.ರಾಮಚಂದ್ರ
ಶ್ರೀ ಕ್ಷೇತ್ರ ಆದಿಚುಂಚನಗಿರಿ

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

ಶಿಷ್ಯನ ಅಜ್ಞಾನವೆಂಬ ಕಣ್ಣು ನೋವನ್ನು ಜ್ಞಾನವೆಂಬ ಅಂಜನದಿಂದ (ಕಡ್ಡಿಯಿಂದ) ಗುಣಪಡಿಸಿ, ಅವನ ಕೀರ್ತಿ ಎಲ್ಲಡೆ ಪಸರಿಸುವಂತೆ ಮಾಡಿದ ಶ್ರೀಗುರುವಿಗೆ ನಮಸ್ಕಾರಗಳು. ಇಂತಹ ಗುರುವಿಗೆ ವಂದಿಸಿ ನಾವು ಕಾರ್ಯೋನ್ಮುಖರಾದಾಗ ಬಾಳಿನಲ್ಲಿ ಸುಖ ಸಂಪತ್ತು ಖಚಿತ. ಹಿಂದೆ ಗುರು ಮುಂದೆ ಗುರಿ ಇದ್ದಾಗ ಮಾತ್ರ ಕಾರ್ಯಗಳಲ್ಲಿ ಯಶಸ್ಸು ನಿಶ್ಚಿತ ದೇವರಿಗಿಂತ ಗುರು, ಗುರುವಿಗಿಂತ ಗುರುಕೃಪೆ ದೊಡ್ಡದು.
ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಮ್ |
ಪಾತ್ರತ್ವಾಧನಮಾಪ್ನೋತಿ ಧನಾದ್ಧರ್ಮಂ ತತಃ ಸುಖಮ್ ||

ಪ್ರತಿಯೊಬ್ಬ ಮಾನವನು ಆದರ್ಶವಂತನಾಗಲು ವಿದ್ಯೆ ಅವಶ್ಯ, ವಿದ್ಯೆಯೊಂದು ಎಂದೂ ನಾಶವಾಗದ, ನಾಶಮಾಡಲಾರದ ಸಂಪತ್ತು, ವಿದ್ಯೆಯಿಂದ ವಿನಯ, ವಿನಯದಿಂದ ಯೋಗ್ಯತೆ, ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ದೊರೆಯುತ್ತದೆ. ಹಾಗಾಗಿ ಇಂದಿನ ಯುವಪೀಳಿಗೆಗೆ ಮೌಲ್ಯಯುತ ಶಿಕ್ಷಣ ಸಿಗಬೇಕಾಗಿದೆ.
ನಮ್ಮ ಭಾರತೀಯ ಸಮಾಜದಲ್ಲಿ ಸನಾತನ ಕಾಲದಿಂದಲೂ ಗುರುಗಳಿಗೆ ವಿಶೇಷ ಸ್ಥಾನವನ್ನು ನೀಡಿದ್ದಾರೆ. ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ ಎಂಬ ನುಡಿ ಗುರುಗಳನ್ನು ಮಾತಾಪಿತೃಗಳ ಸ್ಥಾನದಲ್ಲಿ ಕೂರಿಸಿ ಗೌರವಿಸುತ್ತೇವೆ.
ಗುರುಬ್ರ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||

ಗುರುವಿಗೆ ತ್ರಿಮೂರ್ತಿಗಳ ಸ್ಥಾನ ಗೌರವ ನೀಡಿ ಪೂಜಿಸಲಾಗಿರುವುದನ್ನು ಸೂಚಿಸುತ್ತವೆ. ಬೃಹಸ್ಪತಿಯಿಂದ ಮೊದಲಾಗಿ ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರಾಮಾನುಜಾಚಾರ್ಯ, ಶಂಕರಾಚಾರ್ಯ, ರವೀಂದ್ರನಾಥ ಠಾಗೂರ್, ರಾಧಾಕೃಷ್ಣನ್ ಮೊದಲಾದವರು ಗುರುಗಳ ಪಂಕ್ತಿಯಲ್ಲಿ ಸೇರುತ್ತಾರೆ.
ಜೀವನ ತನ್ನ ಗುರಿಯನ್ನು ಮುಟ್ಟಬೇಕಾದರೆ ಸರಿಯಾದ ದಿಕ್ಸೂಚಿಯೊಂದು ಬೇಕಾಗುತ್ತದೆ. ಬಾಳ ಹಾದಿಯಲ್ಲಿ ನಮಗೆ ಎದುರಾಗುವ ಕತ್ತಲನ್ನು ಕಳೆದು ನಮ್ಮ ಪ್ರಯಾಣವನ್ನು ಸುಗಮಗೊಳಿಸುವ ಗುರುವೊಬ್ಬ ಬೇಕೇ ಬೇಕು.
ಅಂದರೆ ಯಾರು ತಮ್ಮ ಬಾಳನ್ನು ಮೇಣದಂತೆ ಕರಗಿಸಿಕೊಂಡು ಮತ್ತೊಬ್ಬರಿಗೆ ಬೆಳಕನ್ನು ನೀಡುತ್ತಾರೋ. ಅವರು ನಿಸ್ಸಂಶಯವಾಗಿ ಅತ್ಯುತ್ತಮ ಶಿಕ್ಷಕ-ಶಿಕ್ಷಕಿ ಎನಿಸಿಕೊಳ್ಳುತ್ತಾರೆ. ಶಿಕ್ಷಕರು ತಮ್ಮನ್ನೇ ಸಮರ್ಪಿಸಿಕೊಂಡು ಅದೆಷ್ಟೋ ಅಸಂಖ್ಯಾತ ವಿದ್ಯಾರ್ಥಿಗಳ ಬಾಳನ್ನು ಬೆಳಗುತ್ತಾರೆ. ಇದೊಂದು ಉನ್ನತ ಆದರ್ಶ. ಈ ಮಹಾತ್ಕಾರ್ಯ ಸಾಧ್ಯವಾಗುವುದು ಶಿಕ್ಷಕರಿಂದ ಮಾತ್ರ ಸಾಧ್ಯ. ಇನ್ನಾರಿಗೂ ಆ ಶಕ್ತಿಯಿಲ್ಲ ಅಥವಾ ಸತ್ವವಿಲ್ಲ ಅದಕ್ಕೆ ಶಿಕ್ಷಕರಿಗೆ ಅಷ್ಟೊಂದು ಮಹತ್ವವಿರುವುದು. ಪ್ರಾಚೀನ ಕಾಲದಿಂದಲೂ ಗುರುಗಳಿಗೆ ಪೂಜ್ಯನೀಯ ಸ್ಥಾನವಿದೆ. ಅರ್ಥಪೂರ್ಣ ಬದುಕಿನಲ್ಲಿ ಶ್ರೇಯಸ್ಸನ್ನು ಸಾದಿಸಲು ಮುಂದೆ ಗುರಿ ಎಷ್ಟು ಮುಖ್ಯವೋ, ಹಿಂದೆ ನಿಂತ ಗುರುವೂ ಅಷ್ಟೇ ಮುಖ್ಯ.
ಪ್ರತಿಯೊಬ್ಬರ ಬದುಕಿನಲ್ಲೂ ಶಿಕ್ಷಕರ ಪಾತ್ರ ಅಪಾರ. ಮನುಷ್ಯರ ವ್ಯಕ್ತಿತ್ವ ನಿರ್ಮಾಣದ ನಿಜವಾದ ಶಿಲ್ಪಿಗಳು ಎಂದರೆ ಶಿಕ್ಷಕರು. ಅವರೇ ದೇಶದ ಭವಿಷ್ಯದ ನಿಜವಾದ ರೂವಾರಿಗಳೂ. ಜಗತ್ತಿನಲ್ಲಿ ಕೆಟ್ಟ ವಿದ್ಯಾರ್ಥಿಗಳಿರಬಹುದು, ಆದರೆ ಕೆಟ್ಟ ಶಿಕ್ಷಕರಿರುವುದಿಲ್ಲ. ಹಾಗೊಂದು ವೇಳೆ ಕೆಟ್ಟ ಶಿಕ್ಷಕರಿದ್ದಲ್ಲಿ ಅವರು ನಿಜವಾದ ಶಿಕ್ಷಕರೇ ಅಲ್ಲ ಅಥವಾ ಅಂಥವರು ಶಿಕ್ಷಕ ಎನ್ನುವ ಪದಕ್ಕೆ ಅಪಮಾನ ಮಾಡಿದಂತೆ. ಏಕೆಂದರೆ ನಾಗರಿಕ ಸಮಾಜದಲ್ಲಿ ತಪ್ಪು ಮಾಡಿದ, ತಪ್ಪು ಹಾದಿಯನ್ನು ತುಳಿದ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾದವರು ಅವರೇ. ಮತ್ತು ಆ ನಂಬಿಕೆಯಿರುವುದರಿಂದಲೇ ಎಂದಿಗೂ ಅವರು ಕೆಟ್ಟವರಲ್ಲ ಎಂದೇ ಸಮಾಜ ಪರಿಭಾವಿಸುತ್ತದೆ. ಒಂದು ವೇಳೆ ಅವರೇ ಕೆಟ್ಟವರಾದರೆ ವಿದ್ಯಾರ್ಥಿಗಳು ಹೇಗೆ ತಾನೇ ಉತ್ತಮರಾಗಲು ಸಾಧ್ಯ? ಶಿಕ್ಷಕರ ಪಾತ್ರ ಒಂದು ಏಣಿಯ ರೂಪದಂತೆ. ಇದು ಪ್ರತಿಯೊಬ್ಬರಿಗೂ ಅವರ ಜೀವನದಲ್ಲಿ ಮೇಲೆರಲು ಉಪಯೋಗವಾಗುತ್ತದೆ. ಆದರೆ ಏಣಿ ಮಾತ್ರ ಇದ್ದಲ್ಲಿಯೇ ಇರುತ್ತದೆ. ಡಾ.ರಾಧಾಕೃಷ್ಣನ್‍ರವರು ಹೇಳಿರುವಂತೆ ಮಕ್ಕಳನ್ನು ಮಾನವರಾಗಿ, ನಾಗರೀಕರಾಗಿ, ಇನ್ನೊಬ್ಬರೊಡನೆ ಸ್ನೇಹ, ಗೌರವ, ಘನತೆಗಳಿಂದ ವರ್ತಿಸುವಂತೆ ಮಾಡುವುದೇ ಶಿಕ್ಷಣ.
ಶಿಕ್ಷಕರು ರಾಷ್ಟ್ರದ ಬೆನ್ನೆಲುಬು, ಕನಸುಗಳು, ನನಸಾಗುವ ವೇದಿಕೆಯ ಬುನಾದಿಗಳು ಅವರ ಭೌದ್ದಿಕ ಪೂರ್ಣತೆ ಹಾಗೂ ವಿಶ್ವವ್ಯಾಪಿ ಅನುಕಂಪದ ಸತತ ಅನ್ವೇಶಕರಾಗಿರಬೇಕು. ಶಿಕ್ಷಕರ ಅತೀ ಮುಖ್ಯ ಪಾತ್ರವೆಂದರೇ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉತ್ತಮ ಭೊದನೆ ನೀಡಿ ಅವರಿಗೆ ಚೆನ್ನಾಗಿ ಅರ್ಥೈಸಿಕೊಳ್ಳುವ ಶಕ್ತಿಯನ್ನು ಬೆಳಸಿಕೊಳ್ಳಲು ಸಹಾಯ ಮಾಡಬೇಕು ಅಂಥ ಶಿಕ್ಷಕನೇ ನಿಜವಾದ ಗುರು.
ಹುಟ್ಟಿದಂದಿನಿಂದ ತಂದೆ ತಾಯಿಯನ್ನು ಪರಿಪಾಲಿಸುವ ಮಕ್ಕಳು ನಂತರದ ದಿನಗಳಲ್ಲಿ ಶಿಕ್ಷಕರ ಮಾತನ್ನು ಪಾಲಿಸುತ್ತಾರೆ. ಇನ್ನು ಮಕ್ಕಳು ಮನೆಯನ್ನು ಬಿಟ್ಟರೆ ಹೆಚ್ಚಿನ ಸಮಯವನ್ನು ಕಳೆಯುವುದು ಶಾಲೆಗಳಲ್ಲಿ. ಇಂತಹ ಸಮಯದಲ್ಲಿ ಅವರು ಕಲಿತು ಮೈಗೂಡಿಸಿಕೊಂಡದ್ದನೇ ಕೊನೆಯವರೆಗೂ ಪಾಲಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಮಕ್ಕಳು ಏನನ್ನು ಮಾಡುತ್ತಿದ್ದಾರೆ, ಏನನ್ನು ಕಲಿಯುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ಶಿಕ್ಷಕರದ್ದು. ವಿದ್ಯಾರ್ಥಿದೆಸೆಯಲ್ಲಿ ಇದು ಬಹಳ ಮುಖ್ಯವಾದ ಘಟ್ಟ. ಈ ಸಂದರ್ಭದಲ್ಲಿ ಕಲಿತ ಸಂಸ್ಕಾರ, ಸದ್ಗುಣಗಳು ಜೀವನದುದ್ದಕ್ಕೂ ದಾರಿದೀಪವಾಗುತ್ತದೆ. ಇದು ಪ್ರಾಥಮಿಕ ಹಂತವಾದರೆ ವಿದ್ಯಾರ್ಥಿಗಳ ಮುಂದಿನ ಪ್ರತೀ ಹಾದಿಯಲ್ಲೂ ಶಿಕ್ಷಕರ ಪಾತ್ರ ಅಪಾರ. ವೀರಸನ್ಯಾಸಿ ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ಎಲ್ಲರಿಗೂ ಶಿಕ್ಷಣ ದೊರೆತರೆ ಜಗತ್ತನ್ನೇ ಬದಲಿಸಬಹುದು. ಶಿಕ್ಷಣವೆಂದರೆ ಮನುಷ್ಯನಲ್ಲಿ ಮೊದಲೇ ಇರುವ ಪರಿಪೂರ್ಣತೆಯನ್ನು ಬೆಳಕಿಗೆ ತರುವುದು ಆಗಿರುತ್ತದೆ.
ಇಂದು ಶಿಕ್ಷಣವೆನ್ನುವುದು ಸೇವೆಯ, ಸಮರ್ಪಣಾ ಮನೋಭಾವದ ಸ್ಥಿತಿಯಾಗಿ, ಶ್ರೇಷ್ಠವಾದ ಆದರ್ಶವಾಗಿ, ಜ್ಞಾನ ದಾಸೋಹದ ಕೇಂದ್ರವಾಗಿ ಉಳಿದಿಲ್ಲ. ಬದಲಾಗಿ ಸಮಯದ ವೇಗಕ್ಕೆ ಒಗ್ಗಿಕೊಂಡು ಲಾಭದಾಯಕ ಉದ್ಧಿಮೆಯಾಗಿ ಮಾರ್ಪಟ್ಟಿದೆ. ಅದಕ್ಕೆ ತಕ್ಕಂತೆ ಶಿಕ್ಷಕರೂ, ಅವರ ಮನೋಧರ್ಮಗಳೂ ಬದಲಾಗತೊಡಗಿವೆ. ಆ ವೃತ್ತಿಯ ಹಿಂದಿನ ಮೌಲ್ಯ ಕಡಿಮೆಯಾಗತೊಡಗಿದೆ. ಹಣವೇ ಎಲ್ಲವೂ ಆಗಿರುವ ಈ ಸಮಾಜದಲ್ಲಿ ಆದರ್ಶ ಮತ್ತು ಮಾದರಿ ಶಿಕ್ಷಕರಾಗಿದ್ದ ದಿವಂಗತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ನೆನಪು ಮತ್ತೆ ಮತ್ತೆ ಕಾಡುತ್ತದೆ.
ಒಂದು ರಾಷ್ಟ್ರವು ಆರ್ಥಿಕವಾಗಿ ಔದ್ಯೋಗಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಅಭಿವೃದ್ಧಿ ಹೊಂದಲು ಅಲ್ಲಿನ ಪ್ರಜೆಗಳಿಗೆ ಶಿಕ್ಷಣ ಅವಶ್ಯಕ. ಈ ನಿಟ್ಟಿನಲ್ಲಿ ಅತ್ಯುತ್ತಮ ಶಿಕ್ಷಣವನ್ನು ನೀಡುವ ಶಿಕ್ಷಕರು ದೇಶದ ಆಧಾರಸ್ತಂಭ ಎಂದು ನಂಬಿದವರು ಡಾ|| ಸರ್ವಪಲ್ಲಿ ರಾಧಾಕೃಷ್ಣನ್‍ರವರು.
ರಾಧಾಕೃಷ್ಣನ್‍ರವರು 05ನೇ ಸೆಪ್ಟಂಬರ್ 1888ರಲ್ಲಿ ತಮಿಳುನಾಡಿನ ತಿರುತ್ತನಿ ಎಂಬ ಗ್ರಾಮದ ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ತಿರುತ್ತನಿ ಹಾಗೂ ತಿರುಪತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿ, ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿ ತಮ್ಮ 20ನೇ ವಯಸ್ಸಿನಲ್ಲಿ ಎಂ.ಎ ಪದವಿಯನ್ನು ಪಡೆದರು.
ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ ವೇದ ಉಪನಿಷತ್ತು, ಜೈನ ತತ್ತ್ವಜ್ಞಾನ, ಶಂಕರ, ರಾಮಾನುಜ, ಮಧ್ವ, ಪ್ಲಾಟಿನಸ್, ಪ್ಲೇಟೋ, ಭ್ರ್ಯಾಡ್ಲೆ ಮುಂತಾದ ಮಹನೀಯರ ತತ್ತ್ವಜ್ಞಾನವನ್ನು ಆಳವಾಗಿ ಕೈಗೊಂಡರು, ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನೆಡೆದ ರಾಧಾಕೃಷ್ಣನ್ ದೇಶ ವಿದೇಶಗಳ ವಿವಿಧ ತತ್ತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್ ‘ ದಿ ಫಿಲಾಸಫಿ ಆಫ್ ರವೀಂದ್ರನಾಥ ಠ್ಯಾಗೂರ್’ ಎಂಬ ಮೊದಲ ಪುಸ್ತಕ ಬರೆದರು.

ಕಾಳಿದಾಸನ ದೃಷ್ಟಿಯಲ್ಲಿ ಶಿಕ್ಷಕನೆಂತವನಾಗಿರಬೇಕು ಎಂಬುದು ನಿಶ್ಚಿತವಾಗಿದೆ. ಕಾಳಿದಾಸ ಮಹಾಕವಿ ಶಿಕ್ಷಕನನ್ನು ಕುರಿತ ಒಂದು ಸುಲಭಗ್ರಾಹ್ಯವಾದ ಲಕ್ಷಣವನ್ನು ನಿರೂಪಿಸುತ್ತಾರೆ (ಮಾಲವಿಕಾಗ್ನಿಮಿತ್ರ ನಾಟಕದಲ್ಲಿ). ಕೆಲವರಿಗೆ ವಿದ್ಯೆ ಒಲಿದಿರುತ್ತದೆ, ಚೆನ್ನಾಗಿ ಅಧ್ಯಯನ ಮಾಡಿ ಅರಗಿಸಿಕೊಂಡಿರುತ್ತಾರೆ, ಮತ್ತೆ ಕೆಲವರು ತಮಗೆ ತಿಳಿದಿದ್ದನ್ನು ಮತ್ತೊಬ್ಬರಿಗೆ ಹೇಳಿಕೊಡುವುದರಲ್ಲಿ ಪರಿಣಿತರಾಗಿರುತ್ತಾರೆ, ಯಾರು ತಾವೂ ಚೆನ್ನಾಗಿ ತಿಳಿದು ಅಧ್ಯಾಪನ ಮಾಡಿಸುವುದರಲ್ಲಿಯೂ ನಿಪುಣರಾಗಿರುತ್ತಾರೋ ಅಂತಹವರನ್ನು ಶ್ರೇಷ್ಠ ಶಿಕ್ಷಕರೆಂದು ತಿಳಿಯಬೇಕೆಂದು ಮಹಾಕವಿ ಕಾಳಿದಾಸ ಹೇಳುತ್ತಾರೆ.

1909ರಲ್ಲಿ ತತ್ತ್ವಶಾಸ್ತ್ರದ ಉಪನ್ಯಾಸಕರಾಗಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ನೇಮಕಗೊಳ್ಳುವ ಮೂಲಕ ರಾಧಾಕೃಷ್ಣನ್ ಅವರ ಬೋಧನಾ ವೃತ್ತಿ ಶುರುವಾಯ್ತು. 1918ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ನೇಮಕಗೊಂಡರು. ತಮ್ಮ ಸರಳತೆ, ಪಾಂಡಿತ್ಯ ವಿದ್ಯಾರ್ಥಿಗಳ ಬಗೆಗಿನ ಕಾಳಜಿ ಹಾಗೂ ಪ್ರೀತಿಯಿಂದಾಗಿ ಅವರು ಅಚ್ಚುಮೆಚ್ಚಿನ ಗುರುಗಳಾಗಿದ್ದರು. 1921ರಲ್ಲಿ ಕಲಕತ್ತಾ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರು ವಿಶ್ವವಿದ್ಯಾಲಯದಿಂದ ರೈಲ್ವೆ ನಿಲ್ದಾಣದವರೆಗೆ ಹೂವಿನ ಸಾರೋಟಿನಲ್ಲಿ ವಿದ್ಯಾರ್ಥಿಗಳು ರಾಧಾಕೃಷ್ಣನ್‍ರನ್ನು ಕರೆದುಕೊಂಡು ಹೋಗಿ ಬೀಳ್ಕೊಡುಗೆ ನೀಡಿದ್ದು ವಿದ್ಯಾರ್ಥಿಗಳು ಅವರ ಮೇಲಿಟ್ಟದ್ದ ಅತೀವ ಪ್ರೀತಿಗೆ ಸಾಕ್ಷಿ.

ಬನಾರಸ್ ಹಾಗೂ ಆಂಧ್ರ ವಿಶ್ವವಿದ್ಯಾಲಯಗಳ ಕುಲಪತಿಗಳಾಗಿಯೂ ಕೆಲಸ ಮಾಡಿದ ರಾಧಾಕೃಷ್ಣನ್ ಭಾರತಕ್ಕೆ ಸ್ವಾತಂತ್ರ್ಯ ದೊರೆತನಂತರ ಯುನೆಸ್ಕೊ ಪ್ರತಿನಿಧಿಯಾದರು. ಸೋವಿಯತ್ ಒಕ್ಕೂಟದಲ್ಲಿ ಭಾರತದ ರಾಯಭಾರಿಯಾಗಿ, ಪ್ರಥಮ ಉಪರಾಷ್ಟ್ರಪತಿಯಾಗಿ, 1962ರಲ್ಲಿ ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿಯಾಗಿ ಶಿಕ್ಷಕ ವೃತ್ತಿಯಿಂದ ರಾಷ್ಟ್ರದ ಅತ್ಯುನ್ನತ ಹುದ್ದೆ ಅಲಂಕರಿಸಿ, ಶಿಕ್ಷಕ ವೃತ್ತಿಯ ಗೌರವ ಹೆಚ್ಚಿಸಿದರು.
ಇಂದು ಶಿಕ್ಷಣವೆನ್ನುವುದು ಸೇವೆಯ, ಸಮರ್ಪಣಾ ಮನೋಭಾವದ ಸ್ಥಿತಿಯಾಗಿ, ಶ್ರೇಷ್ಠವಾದ ಆದರ್ಶವಾಗಿ, ಜ್ಞಾನ ದಾಸೋಹದ ಕೇಂದ್ರವಾಗಿ ಉಳಿದಿಲ್ಲ. ಬದಲಾಗಿ ಸಮಯದ ವೇಗಕ್ಕೆ ಒಗ್ಗಿಕೊಂಡು ಲಾಭದಾಯಕ ಉದ್ಧ್ದಿಮೆಯಾಗಿ ಮಾರ್ಪಟ್ಟಿದೆ. ಅದಕ್ಕೆ ತಕ್ಕಂತೆ ಶಿಕ್ಷಕರೂ, ಅವರ ಮನೋಧರ್ಮಗಳೂ ಬದಲಾಗತೊಡಗಿವೆ. ಆ ವೃತ್ತಿಯ ಹಿಂದಿನ ಮೌಲ್ಯ ಕಡಿಮೆಯಾಗತೊಡಗಿದೆ. ಹಣವೇ ಎಲ್ಲವೂ ಆಗಿರುವ ಈ ಸಮಾಜದಲ್ಲಿ ಆದರ್ಶ ಮತ್ತು ಮಾದರಿ ಶಿಕ್ಷಕರಾಗಿದ್ದ ದಿವಂಗತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ನೆನಪು ಮತ್ತೆ ಮತ್ತೆ ಕಾಡುತ್ತದೆ.

ಡಾ.ರಾಧಾಕೃಷ್ಣನ್‍ರವರಿಗೆ ಸಂಧಿರುವ ಬಿರುದುಗಳು:-

  1. ಬ್ರಿಟನ್ ಆಕ್ಸ್‍ಫರ್ಡ್ ವಿ.ವಿ. ಗೌರವ ಡಾಕ್ಟರೇಟ್ (1952)
  2. ಅಮೇರಿಕ ಹಾರ್ವರ್ಡ್ ವಿ.ವಿ. ಗೌರವ ಡಾಕ್ಟರೇಟ್ (1953)
  3. ಲಂಡನ್ ಪ್ರವಾಸದಲ್ಲಿದ್ದಾಗ ‘ಆರ್ಡರ್ ಆಫ್ ಮೆರಿನ್’ ಪ್ರಶಸ್ತಿ.
  4. ವ್ಯಾಟಿಕನ್ ಸಿಟಿ ಪೋಪ್ ಜಾನ್‍ರಿಂದ ‘ನೈಟ್ ಆಫ್ ದ ಆರ್ಮಿ.
  5. ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್ – 1968.
  6. ಭಾರತೀಯ ವಿದ್ವಾಭವನ ‘ಬ್ರಹ್ಮವಿದ್ಯಾಭಾಸ್ಕರ’ ಬಿರುದು.
  7. ‘ಟೆಂಪಲ್ಟನ್’ ಪ್ರಶಸ್ತಿ 1973ರಲ್ಲಿ
  8. 1954ರಲ್ಲಿ ಪ್ರತಿಷ್ಠಿತ ‘ಭಾರತ ರತ್ನ ಪ್ರಶಸ್ತಿ’ ಗೌರವ

ರಾಧಾಕೃಷ್ಣನ್‍ರವರು ರಾಷ್ಟ್ರಪತಿಗಳಾಗಿದ್ದ ಸಂದರ್ಭದಲ್ಲಿ ಅವರ ವಿದ್ಯಾರ್ಥಿಗಳು, ಹಿತೈಷಿಗಳು ಅವರ ಬಳಿಗೆ ಹೋಗಿ ಅವರ ಜನ್ಮದಿನ ಆಚರಿಸಲು ವಿನಂತಿಸಿದಾಗ ಅವರು ವಿನೀತರಾಗಿ ನಿರಾಕರಿಸಿದರು. ಅದರ ಬದಲು ರಾಷ್ಟ್ರದ ಅಭ್ಯುದಯಕ್ಕೆ, ಏಳ್ಗೆಗೆ ಪಾತ್ರರಾದ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ ಸೆಪ್ಟಂಬರ್ 5ನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.
ಜೀವಗಳಿಗೆ ಜೀವನ ನೀಡುವ ಏಕೈಕ ವೃತ್ತಿ ಶಿಕ್ಷಕ ವೃತ್ತಿ, ಅದರಷ್ಟು ಶಿಷ್ಟವಾದ, ಶ್ರೇಷ್ಠವಾದ ವೃತ್ತಿ ಇನ್ನೊಂದಿಲ್ಲ. ಆದ್ದರಿಂದ ಶಿಕ್ಷಕ ವೃಂದ ವೃತ್ತಿಗೆ ಅಪಚಾರವೆಸಗದೆ ಜವಾಬ್ದಾರಿಯನ್ನರಿತು ಆತ್ಮಪೂರ್ವಕವಾಗಿ ಕೆಲಸ ನಿರ್ವಹಿಸಬೇಕು. ನಾವೇನಾಗಿದ್ದೇವೆ, ಏನು ಮಾಡುತ್ತಿದ್ದೇವೆಂಬ ಸ್ವಾವಲೋಕನ ಮಾಡಿಕೊಂಡು ಮೊದಲು ತಮ್ಮ ವ್ಯಕ್ತಿತ್ವವನ್ನು ಗಟ್ಟಿಯಾಗಿ ಕಟ್ಟಿಕೊಳ್ಳಬೇಕು. ಜವಾಬ್ದಾರಿಗಳ ಅರಿವು ಆತ್ಮವಿಮರ್ಶೆಯ ಒಲವು ಇದ್ದರೆ ಪರಿವರ್ತನೆ ಮತ್ತು ಪರಿಪೂರ್ಣತೆಗಳು ಸಾಧ್ಯ.

Leave a Reply

Your email address will not be published. Required fields are marked *