ಮೈಸೂರು : ನಗರದ ಹೆಬ್ಬಾಳದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಾಮಿ ಆಚರಿಸಲಾಯಿತು.
ಕೃಷ್ಣನ ಮೂರ್ತಿಗೆ ಪೂಜೆ ಸಲ್ಲಿಸಿ ಈ ವೇಳೆ ಮಾತನಾಡಿದ ಸ್ಥಂಸ್ಥೆಯ ಸಂಸ್ಥಾಪಕ ಎಸ್.ಬಸವರಾಜು, ಭಗವದ್ಗೀತೆಯ ಉಪದೇಶಕನಾದ ಶ್ರೀಕೃಷ್ಣನ ಜೀವನ ಮತ್ತು ಬೋಧನೆಗಳು ಇಂದಿನ ಆಧುನಿಕ ಯುಗಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಫಲಿತಾಂಶದ ಬಗ್ಗೆ ಅತಿಯಾಗಿ ಯೋಚಿಸಬೇಡಿ. ನಿಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ. ಯಶಸ್ಸು ಅಥವಾ ಅಪಜಯದ ಚಿಂತೆ ಬಿಟ್ಟು ಕೆಲಸದ ಮೇಲೆ ಗಮನ ಹರಿಸುವಂತೆ ತಿಳಿಸಿದ್ದಾರೆ.
ಕೃಷ್ಣ ಮತ್ತು ಸುಧಾಮನ ಸ್ನೇಹ ನಮಗೆ ಶ್ರೀಮಂತಿಕೆ ಮತ್ತು ಬಡತನದ ಭೇದವಿಲ್ಲದ ನಿಜವಾದ ಸ್ನೇಹದ ಮಹತ್ವವನ್ನು ಕಲಿಸುತ್ತದೆ. ಕಷ್ಟದಲ್ಲಿದ್ದ ಸ್ನೇಹಿತನಿಗೆ ಗೌರವದಿಂದ ಸಹಾಯ ಮಾಡುವುದೇ ನಿಜವಾದ ಸ್ನೇಹ. ಜತೊಗೆ ಸಮಚಿತ್ತತೆ ಜೀವನದಲ್ಲಿ ಬರುವ ಸುಖ ಮತ್ತು ದುಃಖ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಭೋದಿಸಿದ್ದಾರೆ. ಕೃಷ್ಣನು ತನ್ನ ಜೀವನದ ಯಾವುದೇ ಕಷ್ಟದ ಸಂದರ್ಭದಲ್ಲೂ ತನ್ನ ಮುಖದ ಮೇಲಿನ ನಗೆಯನ್ನು ಕಳೆದುಕೊಳ್ಳಲಿಲ್ಲ. ಮಹಾಭಾರತ ಯುದ್ಧದಲ್ಲಿ ಕೃಷ್ಣನು ತಾನೇ ಮುಂಚೂಣಿಯಲ್ಲಿ ನಿಂತು ಹೋರಾಡಲಿಲ್ಲ. ಬದಲಿಗೆ ಅರ್ಜುನನಿಗೆ ಸರಿಯಾದ ಮಾರ್ಗದರ್ಶನ ನೀಡಿ ಗೆಲುವಿನ ದಾರಿ ತೋರಿಸಿದನು. ಒಬ್ಬ ಉತ್ತಮ ನಾಯಕ ಇತರರನ್ನು ಬೆಳೆಸುತ್ತಾನೆ. ಅಂತಹ ನಾಯಕತ್ವ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ಇಡೀ ಬ್ರಹ್ಮಾಂಡದ ಒಡೆಯನಾಗಿದ್ದರೂ, ಕೃಷ್ಣನು ಅರ್ಜುನನ ರಥದ ಸಾರಥಿಯಾಗಲು ಹಿಂಜರಿಯಲಿಲ್ಲ. ಯಾವುದೇ ಕೆಲಸವೂ ಚಿಕ್ಕದಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಜೀವನದಲ್ಲಿ ಎಷ್ಟೇ ಆಮಿಷಗಳು ಬಂದರೂ ಯಾವಾಗಲೂ ನ್ಯಾಯ ಮತ್ತು ಧರ್ಮದ ಪರವಾಗಿ ನಿಲ್ಲಬೇಕು ಎಂಬುದನ್ನು ಕೃಷ್ಣನ ಬದುಕು ನಮಗೆ ಕಲಿಸುತ್ತದೆ. ಕೃಷ್ಣನ ಈ ತತ್ವಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಮಾನಸಿಕ ಶಾಂತಿ ಮತ್ತು ಯಶಸ್ಸ ಲಭಿಸುತ್ತದೆ ಎಂದರು.
