- ಕೆಎಸ್‌ಒಯುವಿನಲ್ಲಿ NCVET Dual Recognition ಕುರಿತು ಸಾಮರ್ಥ್ಯ ವೃದ್ಧಿ ಕಾರ್ಯಾಗಾರ
ಮೈಸೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಶಿಕ್ಷಣಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳು ಅಗತ್ಯವಾದ ಕೌಶಲ್ಯ ಮತ್ತು ವೃತ್ತಿಪರ ಅರ್ಹತೆಗಳನ್ನು ಹೊಂದುವುದು ಅತ್ಯವಶ್ಯಕವಾಗಿದೆ. ಶೈಕ್ಷಣಿಕ ಜ್ಞಾನದೊಂದಿಗೆ ಕೌಶಲ್ಯವನ್ನು ಬೆಳೆಸುವುದರಿಂದ ಯುವಜನರ ಉದ್ಯೋಗಾರ್ಹತೆ ಹೆಚ್ಚುವುದಲ್ಲದೆ, ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ ಅವರು ಸಮರ್ಥವಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಈ ಮೂಲಕ ಭಾರತದ ಭವಿಷ್ಯದ ಮಾನವ ಸಂಪನ್ಮೂಲವನ್ನು ಸಶಕ್ತಗೊಳಿಸಲು ಕೌಶಲ್ಯಾಧಾರಿತ ಶಿಕ್ಷಣ ಪ್ರಮುಖ ಪಾತ್ರ ವಹಿಸಲಿದೆ ಎಂದು ಕೆಎಸ್‌ಒಯು ಆಡಳಿತ ಮಂಡಳಿ ಸದಸ್ಯ ಹಾಗೂ ಕೃಷ್ಣರಾಜನಗರ ಶಾಸಕ ಡಿ. ರವಿಶಂಕರ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಆಂತರಿಕ ಗುಣಮಟ್ಟ ಆಶ್ವಾಸನಾ ಕೇಂದ್ರ (CIQA) ವತಿಯಿಂದ ಶುಕ್ರವಾರ ಕೆಎಸ್‌ಒಯುವಿನ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ “NCVET Dual Recognition: Operationalizing Skill Development, Assessment and Awarding Functions at KSOU” ಎಂಬ ಒಂದು ದಿನದ ಸಾಮರ್ಥ್ಯ ವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಎಸ್‌ಒಯು ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿಯಿಂದ (NCVET) ದ್ವಿ-ಪ್ರಮಾಣಪತ್ರ ಪ್ರದಾನ ಸಂಸ್ಥೆ (Dual Awarding Body)ಯಾಗಿ ಮಾನ್ಯತೆ ಪಡೆದಿದ್ದು, ಈ ಸಂಬಂಧ NCVETನೊಂದಿಗೆ ಒಡಂಬಡಿಕೆ (MoU) ಮಾಡಿಕೊಂಡಿದೆ. ಈ ದ್ವಿ-ಮಾನ್ಯತೆಯಡಿ ಕೌಶಲ್ಯಾಧಾರಿತ ಕಾರ್ಯಕ್ರಮಗಳನ್ನು ರೂಪಿಸುವುದು, ಅನುಷ್ಠಾನಗೊಳಿಸುವುದು, ಮೌಲ್ಯಮಾಪನ ನಡೆಸುವುದು ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡುವ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಕೌಶಲ್ಯಾಭಿವೃದ್ಧಿ ಶಿಕ್ಷಣದ ಅನುಷ್ಠಾನದಲ್ಲಿ ಸರ್ಕಾರದೊಂದಿಗೆ ಸಹಕರಿಸಲು ತಾವು ಸಿದ್ಧರಿದ್ದು, ಕೆಎಸ್‌ಒಯು ಆಡಳಿತ ಮಂಡಳಿ ಸದಸ್ಯರಾಗಿ ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಡಿ. ರವಿಶಂಕರ್ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಎಸ್‌ಒಯು ಕುಲಪತಿ ಪ್ರೊ. ಎ.ಪಿ. ಜ್ಞಾನ ಪ್ರಕಾಶ್ ಮಾತನಾಡಿ, ಬದಲಾಗುತ್ತಿರುವ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಉನ್ನತ ಶಿಕ್ಷಣದ ಸ್ವರೂಪದಲ್ಲೂ ಬದಲಾವಣೆ ಅಗತ್ಯವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದ ಜೊತೆಗೆ ಪ್ರಾಯೋಗಿಕ ಜ್ಞಾನ ಮತ್ತು ಉದ್ಯೋಗಕ್ಕೆ ಪೂರಕವಾದ ಕೌಶಲ್ಯಗಳನ್ನು ಒದಗಿಸುವ ಮೂಲಕ ಅವರ ಸಾಮರ್ಥ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ವಿಶ್ವವಿದ್ಯಾಲಯಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ವಿಶೇಷವಾಗಿ ಮುಕ್ತ ಮತ್ತು ದೂರ ಶಿಕ್ಷಣ (ODL) ವ್ಯವಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯಾಧಾರಿತ ತರಬೇತಿ ಮತ್ತು ವೃತ್ತಿಪರ ಅರ್ಹತೆಗಳನ್ನು ಪಡೆಯಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ತಿಳಿಸಿದರು.
NCVETನಿಂದ ಕೆಎಸ್‌ಒಯುವಿಗೆ ದೊರೆತಿರುವ Dual Recognition ವಿಶ್ವವಿದ್ಯಾಲಯದಲ್ಲಿ ಕೌಶಲ್ಯಾಧಾರಿತ ಶಿಕ್ಷಣದ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಇದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಗತ್ಯವಾದ ಅರ್ಹತೆಗಳ ಅಭಿವೃದ್ಧಿ, ತರಬೇತಿ, ಮೌಲ್ಯಮಾಪನ ಮತ್ತು ಪ್ರಮಾಣಪತ್ರ ಪ್ರದಾನ ವ್ಯವಸ್ಥೆಗಳನ್ನು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ರೂಪಿಸಬೇಕು ಎಂದು ಪ್ರೊ. ಎ.ಪಿ. ಜ್ಞಾನ ಪ್ರಕಾಶ್ ಹೇಳಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನವನ್ನು ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ ಸಂಪರ್ಕಿಸುವ ಮೂಲಕ ಅವರನ್ನು ಭವಿಷ್ಯದ ಉದ್ಯೋಗಾವಕಾಶಗಳಿಗೆ ಸಜ್ಜುಗೊಳಿಸುವುದು ಕೆಎಸ್‌ಒಯುವಿನ ಪ್ರಮುಖ ಆದ್ಯತೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಾಗಾರದಲ್ಲಿ NCVET, ನವದೆಹಲಿಯ ಕಾರ್ಯಕಾರಿ ಸದಸ್ಯ ಪ್ರೊ. ಅಶೋಕ್ ಕುಮಾರ್ ಗಾಬಾ ಹಾಗೂ NCVETನ ಹಿರಿಯ ಸಲಹೆಗಾರ ಶ್ರೀ ಅಮಿತ್ ಶರ್ಮಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, NCVETನ ನಿಯಮಾವಳಿ, ಕೌಶಲ್ಯಾಭಿವೃದ್ಧಿ ವ್ಯವಸ್ಥೆ, ವೃತ್ತಿಪರ ಅರ್ಹತೆಗಳ ಅಭಿವೃದ್ಧಿ, ಮೌಲ್ಯಮಾಪನ ಹಾಗೂ ಪ್ರಮಾಣಪತ್ರ ಪ್ರದಾನ ಪ್ರಕ್ರಿಯೆಗಳ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ಕಾರ್ಯಾಗಾರದಲ್ಲಿ ಉದ್ಯೋಗಾರ್ಹತೆ ಮತ್ತು ವೃತ್ತಿಪರ ಶಿಕ್ಷಣ, NCVETನ ಪಾತ್ರ ಮತ್ತು ಜವಾಬ್ದಾರಿಗಳು, ODL ವ್ಯವಸ್ಥೆಗೆ ಅನುಗುಣವಾದ ಕೌಶಲ್ಯ ಅರ್ಹತೆಗಳ ಅಭಿವೃದ್ಧಿ, ಬಹು-ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳ ಸ್ಥಾಪನೆ ಹಾಗೂ ಮೌಲ್ಯಮಾಪನ ವಿಧಾನಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಿತು.
NCVETನ ದ್ವಿ-ಮಾನ್ಯತೆಯಡಿ ಕೆಎಸ್‌ಒಯುವಿನಲ್ಲಿ ಕೌಶಲ್ಯಾಭಿವೃದ್ಧಿ, ತರಬೇತಿ, ಮೌಲ್ಯಮಾಪನ ಮತ್ತು ಪ್ರಮಾಣಪತ್ರ ಪ್ರದಾನ ಕಾರ್ಯಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಅಗತ್ಯವಾದ ಜ್ಞಾನ ಮತ್ತು ಸಾಮರ್ಥ್ಯವನ್ನು ಬೋಧಕ ವರ್ಗ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಒದಗಿಸುವಲ್ಲಿ ಕಾರ್ಯಾಗಾರವು ಸಹಕಾರಿಯಾಯಿತು.
ಕಾರ್ಯಕ್ರಮದಲ್ಲಿ ಕೆಎಸ್‌ಒಯು ಕುಲಸಚಿವ ಪ್ರೊ. ಎಸ್.ಕೆ. ನವೀನ್ ಕುಮಾರ್, CIQA ನಿರ್ದೇಶಕ ಪ್ರೊ. ನಿರಂಜನ ರಾಜ್ ಎಸ್., ಶೈಕ್ಷಣಿಕ ಡೀನ್ ಪ್ರೊ. ಎಂ. ರಮಾನಾಥಂ ನಾಯ್ಡು, ಪರೀಕ್ಷಾಂಗ ಕುಲಸಚಿವ ಡಾ. ಸಿ.ಎಸ್. ಆನಂದ ಕುಮಾರ್, ಅಧ್ಯಯನ ಕೇಂದ್ರಗಳ ಡೀನ್ ಡಾ. ಎನ್. ಆನಂದ ಗೌಡ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
