ಚಾಮರಾಜನಗರ: ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಇದರಿಂದ ಆರೋಗ್ಯ ಸುಧಾರಣೆಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ ಅವರು ತಿಳಿಸಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್, ಮೈ ಭಾರತ್, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸ್ವಚ್ಛತೆ ಪಕ್ವವಾಡ’ (ರಾಷ್ಟ್ರೀಯ ಸ್ವಚ್ಛತಾ ದಿನ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸ್ವಚ್ಛತಾ ದಿನದ ಅಂಗವಾಗಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುವುದು. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಎಲ್ಲರ ಆರೋಗ್ಯ ಸುಧಾರಣೆಯಾಗಲಿದೆ ಎಂದರು.
ಸ್ವಚ್ಛತೆಯನ್ನು ಕಾಪಾಡುವುದರ ಜತೆಗೆ ಪರಿಸರವನ್ನು ಸಂರಕ್ಷಣೆ ಮಾಡುವುದು ಸಹ ನಮ್ಮ ಮೂಲಭೂತ ಕರ್ತವ್ಯವಾಗಿದೆ. ಪರಿಸರ ಸಂರಕ್ಷಣೆ ಮಾಡುವುದರಿಂದ ದೇಶದ ಅಭಿವೃದ್ಧಿಯಾಗಲಿದೆ. ಹಾಗಾಗಿ ಎಲ್ಲರೂ ಗಿಡ ಮರಗಳನ್ನು ಬೆಳೆಸಿ ರಕ್ಷಣೆ ಮಾಡಬೇಕು. ಹಸಿರು ವಾತಾವರಣವನ್ನು ಕಾಪಾಡಬೇಕು. ಇದರಿಂದ ಉತ್ತಮವಾಗಿ ಮಳೆಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ನೀರು ಪೆÇೀಲಾಗದಂತೆ ನೋಡಿಕೊಳ್ಳಬೇಕು. ಒಣ ಕಸ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ವಾಹನಗಳಿಗೆ ನೀಡಬೇಕು. ಅಲ್ಲದೆ ಇದರ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ನ್ಯಾಯಾಧೀಶರಾದ ಈಶ್ವರ್ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಮಹದೇವಸ್ವಾಮಿ ಅವರು ಮಾತನಾಡಿ ಸ್ವಚ್ಚತೆ ಮನೆಯಿಂದಲ್ಲ, ಮನಸ್ಸಿನಿಂದ ಪ್ರಾರಂಭವಾಗಬೇಕು. ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಸ್ವಚ್ಛತೆಯ ಬಗ್ಗೆ ಮಾರ್ಗದರ್ಶನ ಮಾಡಬೇಕು. ಕಾಲೇಜುಗಳ ಸುತ್ತ ಮುತ್ತ ಸಸಿ ನೆಟ್ಟು ವಿದ್ಯಾರ್ಥಿಗಳು ಪೋಸಿಸಬೇಕು ಎಂದರು.
ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷರಾದ ಜಿ.ಬಂಗಾರು ಅವರು ಮಾತನಾಡಿ ಮೈ ಭಾರತ್ ಕೇಂದ್ರ ಜೊತೆ ಕೈಜೋಡಿಸಿ ನಮ್ಮ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ವಿವಿಧ ಕಾಲೇಜುಗಳಲ್ಲಿ ಕಾನೂನು ಅರಿವು, ನೋಟ್ ಬುಕ್ ವಿತರಣೆ ಹಾಗೂ ಇನ್ನಿತರೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂದರು
ಈ ಕಾರ್ಯಕ್ರಮದಲ್ಲಿ, ಎನ್.ಎಸ್.ಎಸ್.ಸಂಚಾಲಕಿ ದೀಪಾ, ಐಕ್ಯೂಐಸಿ ಸಂಚಾಲಕಿ ಡಾ. ಲಿಖಿತಾ ಎಸ್ ಅನುರಾಧ, ಮೈ ಭಾರತ್ ಕೇಂದ್ರದ ಸಹನಾ, ಸೇರಿದಂತೆ ಇತರರು ಉಪಸ್ಥಿತರಿದ್ದರು.
Related