ಹನೂರು :ಕಾವೇರಿ ವನ್ಯಜೀವಿಧಾಮqದ ಹೊಳೆಮುರಿದಟ್ಟಿ ಗಸ್ತು ಪ್ರದೇಶದಲ್ಲಿ ಆಗಸ್ಟ್ 15 ರಂದು ನಡೆದ ಅರಣ್ಯ ಇಲಾಖೆ ಮತ್ತು ಬೇಟೆಗಾರರ ನಡುವಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮುಖ್ಯಮಂತ್ರಿ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನೀಲ್ ಬೋಸ್ ತಿಳಿಸಿದರು.
ತಾಲೂಕಿನ ತೋಮಿಯರ್ ಪಾಳ್ಯ, ಮರಿಯಮಂಗಲ ಮತ್ತು ಲಾಜರ ದೊಡ್ಡಿ ಗ್ರಾಮಗಳಿಗೆ ಭೇಟಿ ನೀಡಿದ ಅವರು ಶೂಟೌಟ್‌ನಲ್ಲಿ ಮೃತಪಟ್ಟ ಜಾನ್ ರೋಸ್ ಪೀಟರ್, ಶಬಸ್ತಿಯನ್ ಡೇವಿಡ್ ಕುಮಾರ್ ಮತ್ತು ಆಂತೋಣಿ ಸ್ವಾಮಿ ಅವರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ ಧನ ಸಹಾಯ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, “ಆಗಸ್ಟ್ 15 ರಂದು ನಡೆದ ಘಟನೆ ಇದೀಗ ತನಿಖೆಯ ಹಂತದಲ್ಲಿದೆ. ತನಿಖಾ ವರದಿ ಬಂದ ನಂತರವೇ ಸತ್ಯಾಸತ್ಯತೆ ತಿಳಿಯಲಿದೆ. ಅದಕ್ಕೂ ಮುಂಚಿತವಾಗಿಯೇ ರಾಜ್ಯ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದೆ. ವರದಿ ಬಂದ ನಂತರ ಕಾನೂನಾತ್ಮಕವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಅಲ್ಲಿಯವರೆಗೆ ಊಹಾಪೋಹಗಳಿಗೆ ಕಿವಿಗೊಡದೆ ತಾಳ್ಮೆಯಿಂದ ಕಾಯಬೇಕು” ಎಂದು ಮನವಿ ಮಾಡಿದರು.
“ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿರಲಿ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಬದ್ಧವಾಗಿದೆ. ಕಾನೂನು ಎಲ್ಲರಿಗೂ ಸಮಾನ. ತನಿಖೆಗೆ ಯಾವುದೇ ಅಡ್ಡಿ ಬರದಂತೆ ಸಹಕರಿಸಬೇಕು” ಎಂದು ಅವರು ಹೇಳಿದರು.
ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಮಹಿಮಾ ದಾಸ್ ರವರಿಗೆ ಬೆದರಿಕೆ ಇರುವ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದವರು ಘಟನೆಯ ಸತ್ಯತೆ ತಿಳಿಯಬೇಕಿರುವುದು ಮಹಿಮದಾಸ್ ರವರಿಂದ ಅವರಿಗೆ ಇಲಾಖೆಯಿಂದ ಬೆದರಿಕೆ ಇದ್ದರೆ ಸರ್ಕಾರದ ವತಿಯಿಂದ ಅಗತ್ಯ ರಕ್ಷಣೆ ಒದಗಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಆರ್. ನರೇಂದ್ರ, ಹನೂರು ತಹಶೀಲ್ದಾರ್ ಚೈತ್ರ, ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಕೊಪ್ಪಾಳಿ ಮಹದೇವ್ ನಾಯ್ಕ, ಕುದೇರು ಹಾಲು ಮಂಡಳಿಯ ನಿರ್ದೇಶಕ ತಾರೀಕ್, ತೋಮಿಯರ್ ಪಾಳ್ಯ ಗ್ರಾಮದ ಚರ್ಚ್ ಧರ್ಮಗುರು ಸೇರಿದಂತೆ ಗ್ರಾಮಸ್ಥರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
