ಚಾಮರಾಜನಗರ: ಪರವಾನಗಿ ಪಡೆಯದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ದ ಗರಿಷ್ಠ ಪ್ರಮಾಣದಲ್ಲಿ ದಂಡ ವಿಧಿಸಿ ಪರವಾನಗಿ ಪಡೆಯಲು ಸೂಚಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಅಧಿಕಾರಿಗಳಿಗೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಯಮ ಬಾಹಿರವಾಗಿ ತಂಬಾಕು ಮಾರಾಟ ಮಾಡುವವರ ವಿರುದ್ದ ಕ್ರಮ ಜರುಗಿಸಬೇಕು. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರು ಪ್ರತ್ಯೇಕ ಪರವಾನಗಿ ಹೊಂದಿರಬೇಕು. ತಂಬಾಕು ನಿಯಂತ್ರಣ ಸಮಿತಿ ರಚಿಸಿಕೊಂಡು ಕಾರ್ಯಾಚರಣೆ ನಡೆಸಬೇಕು. ಪರಿಶೀಲನೆ ವೇಳೆ ತಂಬಾಕು ಉತ್ಪನ್ನ ಮಾರಾಟಕ್ಕಾಗಿ ಪರವಾನಗಿ ಇಲ್ಲದೇ ಇದ್ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಂಡ ವಿಧಿಸಬೇಕು. ಪರವಾನಗಿ ಪಡೆಯಲು ಕಟ್ಟುನಿಟ್ಟಾಗಿ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.
ನಗರ, ಗ್ರಾಮೀಣ ಪ್ರದೇಶಗಳ ಶಾಲಾ, ಶೈಕ್ಷಣಿಕ ಸಂಸ್ಥೆಗಳ ಆವರಣದ 100ಮೀ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿರುವುದಿಲ್ಲ. ನಿಗದಿತ ಪ್ರದೇಶದ ಬಳಿ ಯಾವುದಾದರೂ ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಿಂದ್ದಾಗೆ ದಾಳಿ ನಡೆಸಿ ಉಲ್ಲಂಘನೆ ಪ್ರಕರಣಗಳು ಕಂಡು ಬಂದರೆ ದಂಡ ವಿಧಿಸಬೇಕು. ಜಿಲ್ಲಾ ತಂಬಾಕು ನಿಯಂತ್ರಣ ಘಟಕಕ್ಕೆ ವರದಿ ಮಾಡಬೇಕು ಎಂದರು.
ಆರೋಗ್ಯ ಇಲಾಖೆಯಿಂದ ಸರ್ವೆ ನಡೆಸಿ ತಂಬಾಕು ಮುಕ್ತ ಗ್ರಾಮ ಕಾರ್ಯಕ್ಕಾಗಿ ಆಯ್ಕೆ ಮಾಡಲಾಗಿರುವ 68 ಗ್ರಾಮಗಳಲ್ಲಿ ವಿಶೇಷವಾಗಿ ಗ್ರಾಮಸಭೆ ಆಯೋಜಿಸಿ ನಿರ್ಣಯಿಸಬೇಕಿದೆ. ಘೋಷಣೆ ಮಾನದಂಡಗಳನ್ನು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಅನುಸರಿಸಿ ತಂಬಾಕು ಮುಕ್ತ ಗ್ರಾಮ ಘೋಷಣೆ ಅನುಷ್ಠಾನಕ್ಕಾಗಿ ಪರಿಣಾಮಕಾರಿಯಾಗಿ ತೊಡಗಿಕೊಳ್ಳುವಂತೆ ನಿರ್ದೇಶನ ನೀಡಿದರು.
ತಂಬಾಕು, ಮಾದಕದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು, ಕೋಟ್ಪಾ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ ಅನುಸಾರ ತಪಾಸಣೆ ಪರಿಶೀಲನೆ ಮತ್ತಷ್ಟು ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ಇದೇ ವೇಳೆ ಕೋಟ್ಪಾ ಕಾಯ್ದೆಯಡಿ ಕಳೆದ ಏಪ್ರಿಲ್ 2025 ರಿಂದ ಅಕ್ಟೋಬರ್ ರವರೆಗೆ ವ್ಯಾಪಕ ದಾಳಿ ನಡೆಸಿ ಹೆಚ್ಚು ದಂಡ ವಸೂಲಿ ಮಾಡಿರುವ ಚಾಮರಾಜನಗರ ತಾಲೂಕು ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್ ಹಾಗೂ ಹನೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರಕಾಶ್ ಅವರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಚಂದ್ರಶೇಖರ್, ಡಾ. ಸುಂದರೇಶ್, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು
Related