- ಸಿಡಬ್ಲ್ಯೂಆರ್ ಸಿ ಆದೇಶ ಖಂಡಿಸಿ ಪ್ರತಿಭಟನೆ
ಚಾಮರಾಜನಗರದ: ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶಿಸಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಶ್ರೀ ಚಾಮರಾಜೇಶ್ವರ ಉದ್ಯಾನ ವನದ ಮುಂಭಾಗದಲ್ಲಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಾ.ಗು.ನಾಗರಾಜು ಹಾಗೂ, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ನಮ್ಮನೆ ಪ್ರಶಾಂತ್ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ, ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ದ, ತಮಿಳುನಾಡು ಸರ್ಕಾರ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಾ.ಗು.ನಾಗರಾಜು ಮಾತನಾಡಿ, ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್ಸ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಸಿ.ಡಬ್ಲ್ಯೂ.ಆರ್.ಸಿ. ಹೊರಡಿಸಿರುವ ಆದೇಶವನ್ನು ಮರುಪರಿಶೀಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಇತರರುು ಎಂದು ಒತ್ತಾಯಿಸಿದರು.
ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಅತ್ಯಂತ ಖಂಡನೀಯ. ಈ ಆದೇಶ ಕರ್ನಾಟಕ ಜನತೆಗೆ ಮಾರಕವಾಗಿದೆ. ಈ ಅದೇಶ ಸರಿಯಾದ ಕ್ರಮವಲ್ಲ ಕೇಂದ್ರ ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವುದು ಯಾವ ಉದ್ದೇಶಕ್ಕೆ ಅಂದರೆ ಎರಡು ರಾಜ್ಯಗಳ ನಡುವೆ ನೀರಿನ ವಿಚಾರ ಬಂದಾಗ ಅದನ್ನು ನ್ಯಾಯಯುತವಾಗಿ ಪರಿಶೀಲಿಸಿ ಎರಡು ರಾಜ್ಯಗಳ ನಡುವೆ ಯಾವುದೇ ಕಿರಿಕಿರಿಯಾಗದೆ ಉತ್ತಮ ಬಾಂದವ್ಯವನ್ನು ಕಾಪಾಡಿ ಎಂದು ಈ ಸಮಿತಿಯನ್ನು ಮಾಡಿದ್ದಾರೆ. ಆದರೆ ಈ ಸಮಿತಿ ಹಿಟ್ಲರ್ ಆಡಳಿತ, ಸರ್ವಾಧಿಕಾರ ಧೋರಣೆ ನಡೆಸುತ್ತಿದೆ. ಇವರಿಗೆ ಕರ್ನಾಟಕ ಜನರ ಹಿತದೃಷ್ಟಿ.ಸಾರ್ವಜನಿಕ ಹಿತದೃಷ್ಟಿ ಬೇಕಿಲ್ಲ. ನಿಮ್ಮ ಆದೇಶ ಜನವಿರೋಧಿ ಆದೇಶವಾಗಿದೆ. ಈ ಕೂಡಲೇ ಈ ಆದೇಶ ರದ್ದಾಗಬೇಕು ಎಂದು ಒತ್ತಾಯಿಸಿದರು.
ಕೆಆರ್ ಎಸ್ ನಲ್ಲಿ ಕುಡಿಯುವ ನೀರಿಗಾಗಿ ಮಾತ್ರ ನೀರಿದೆ. ಆಗಾಗಿ ರಾಜ್ಯ ಸರ್ಕಾರ ತಮಿಳುನಾಡಿಗೆ ಒಂದು ಹನಿಯನ್ನು ನೀರು ಬಿಡಬಾರದು. ಆದೇಶಕ್ಕೆ ಹೆದರಿ ತಮಿಳುನಾಡಿಗೆ ರಾತ್ರೋರಾತ್ರಿ ನೀರು ಹರಿಸಿದರೆ ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡುತ್ತೇವೆ ಎಂದು ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ನಮ್ಮನೆ ಪ್ರಶಾಂತ್ ಮಾತನಾಡಿ, ಕಾವೇರಿ ನೀರು ನಿರ್ವಹಣಾ ಸಮಿತಿ ಪ್ರತಿವರ್ಷವೂ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಾ ಬಂದಿದೆ. ಮಳೆಯ ಕೊರತೆಯಿಂದ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಜನ,ಜಾನುವಾರ ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಪ್ರತಿವರ್ಷವೂ ತಮಿಳುನಾಡು ಸರ್ಕಾರ ಕಾವೇರಿ ನೀರಿನ ವಿಚಾರದಲ್ಲಿ ಕ್ಯಾತೆ ತೆಗೆದು ನಮ್ಮ ಸ್ವಾಭಿಮಾನವನ್ನು ಕೆಣಕುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ಯಾವುದೇ ಆದೇಶಕ್ಕೂ ಮಣಿಯಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಕೆರೆಹಳ್ಳಿ ವೆಂಕಟೇಶ್, ಮೈಸೂರು ಜಿಲ್ಲಾಧ್ಯಕ್ಷ ಸಂತೋಷ, ಚಾಮರಾಜನಗರ ಜಿಲ್ಲಾಧ್ಯಕ್ಷ ಹೊನ್ನಶೆಟ್ಟರಹುಂಡಿ ದೇವರಾಜ್, ಜಯ ಕರ್ನಾಟಕ ಮುಖಂಡ ಈಶ್ವರ್, ಬ್ರಹ್ಮಾನಂದ, ಶಿವನಂಜಪ್ಪ, ಶಿವು, ಸಾಗರ್ ರಾವತ್, ಸುವರ್ಣ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿವಿ ಸಿದ್ದರಾಜು, ಚೆನ್ನಿಗಶೆಟ್ಟಿ, ಗೋವಿಂದನಾಯಕ, ಆಟೋ ಮಂಜು, ನಾಗ್, ತಾಲೂಕು ಅಧ್ಯಕ್ಷ ಜಯಶೀಲ, ಡಿ.ಎನ್.ಉಷಾ ಇತರರು ಹಾಜರಿದ್ದರು.