ಯಳಂದೂರು ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ಜೈಶಂಕರ್, ಉಪಾಧ್ಯಕ್ಷರಾಗಿ ಮುತ್ತುರಾಜ್, ಕಾರ್ಯದರ್ಶಿಯಾಗಿ ಸಂಪತ್ ಅವಿರೋಧ ಆಯ್ಕೆ

ಯಳಂದೂರು: ತಾಲೂಕು ವಕೀಲರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಂ.ಜೈಶಂಕರ್, ಉಪಾಧ್ಯಕ್ಷರಾಗಿ ಎಂ.ಮುತ್ತುರಾಜು ಬೂದಿತಿಟ್ಟು, ಕಾರ್ಯದರ್ಶಿಯಾಗಿ ಜಿ.ಎನ್.ಸಂಪತ್ ಅವಿರೋಧವಾಗಿ ಆಯ್ಕೆಯಾದರು.

ಇದಕ್ಕೂ ಮುನ್ನ ವಕೀಲರ ಸಂಘದ ಸಭಾ ಭವನದಲ್ಲಿ ಸಂಘದ ಅಡಕ್ ಸಮಿತಿ ಅಧ್ಯಕ್ಷರಾದ ಗೌಡಹಳ್ಳಿ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಭೆ ನಡೆಯಿತು. ಈ ಸಭೆಯಲ್ಲಿ ಸರ್ವಸದಸ್ಯರು ಅವಿರೋಧ ಆಯ್ಕೆಗೆ ಸೂಚಿಸಿದ್ದರಿಂದ ಅಂತಿಮವಾಗಿ ಜೈಶಂಕರ್ ಅಧ್ಯಕ್ಷರಾಗಿಯೂ, ಎಂ.ಮುತ್ತುರಾಜು ಬೂದಿತಿಟ್ಟು ಉಪಾಧ್ಯಕ್ಷರಾಗಿ, ಜಿ.ಎನ್.ಸಂಪತ್ ಕಾರ್ಯದರ್ಶಿಯಾಗಿ, ಮೇಘ ಜಂಟಿ ಕಾರ್ಯದರ್ಶಿಯಾಗಿ, ರಂಜಿತ ಖಜಾಂಚಿಯಾಗಿ ಆಯ್ಕೆಯಾದರು. ನೂತನ ಪದಾಧಿಕಾರಿಗಳಿಗೆ ಹಿರಿಯ ವಕೀಲರಾದ ಬಿ.ಎಂ.ಮಹದೇವಸ್ವಾಮಿರವರು ಪ್ರತಿಜ್ಞಾ ವಿಧಿ ಬೋಧಿಸಿದರು.

ನಂತರ ಮಾತನಾಡಿದ ನೂತನ ಅಧ್ಯಕ್ಷ ಎಂ.ಜೈಶಂಕರ್, ತಾಲೂಕು ವಕೀಲರ ಸಂಘಕ್ಕೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಸಂಘದ ಸರ್ವಸದಸ್ಯರಿಗೂ ಆಭಾರಿಯಾಗಿರುತ್ತೇನೆ. ನಮ್ಮ ಅವಧಿಯಲ್ಲಿ ಯಳಂದೂರು ವಕೀಲರ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. ವಕೀಲರು ಹಾಗೂ ಸಿಬ್ಬಂದಿಗಳ ಜೊತೆಗೆ ಉತ್ತಮ ಬಾಂಧವ್ಯ ವೃದ್ಧಿಸಿ ಯಳಂದೂರು ವಕೀಲರ ಸಂಘವನ್ನು ಮಾದರಿಯಾಗಿ ರೂಪಿಸಲು ಶ್ರಮಿಸಲಾಗುವುದು ಎಂದರು.
ಉಪಾಧ್ಯಕ್ಷ ಎಂ.ಮುತ್ತುರಾಜು ಮಾತನಾಡಿ, ಯಳಂದೂರು ವಕೀಲರ ಸಂಘದ ಅಭಿವೃದ್ಧಿಯೇ ನಮ್ಮ ಪ್ರಥಮ ಆಧ್ಯತೆಯಾಗಿದ್ದು, ಸಂಘದ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡುವಂತೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಸದಸ್ಯರ ನಿರೀಕ್ಷೆಯನ್ನೂ ಮೀರಿ ಯಳಂದೂರು ವಕೀಲರ ಸಂಘದ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಲಾಗುವುದು ಎಂದರು.
ಕಾರ್ಯದರ್ಶಿ ಜಿ.ಎನ್.ಸಂಪತ್ ಮಾತನಾಡಿ, ಯಳಂದೂರು ವಕೀಲರ ಸಂಘವನ್ನು ಮಾದರಿಯಾಗಿ ರೂಪಿಸುವುದಲ್ಲದೇ ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಸಂಘವನ್ನು ಬಲಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವಕೀಲರಾದ ಬಿ.ಎಂ.ಮಹದೇವಸ್ವಾಮಿ, ಸಿ.ನಾಗರಾಜ್, ಸಿ.ಸಿದ್ದರಾಜು, ಎನ್.ಕೃಷ್ಣ, ರಾಜಣ್ಣ, ಸಿ.ಮಹದೇವಸ್ವಾಮಿ, ಶ್ರೀನಿವಾಸಮೂರ್ತಿ, ಶಶಿಧರ, ರವೀಶ, ಅಶ್ವಿನ್ ಕುಮಾರ್, ಎಂ.ನಾಗರಾಜ್, ನಾಗರತ್ನ, ಪರಶಿವಮೂರ್ತಿ, ನಂಜುಂಡಸ್ವಾಮಿ, ಕಾಂತರಾಜು, ಚಂದನಾ, ಎಂ.ಕುಮಾರಸ್ವಾಮಿ, ಶಾಂತರಾಜು, ಆರ್.ಕುಮಾರಸ್ವಾಮಿ, ಕುಮಾರ್ ವೈ.ಸಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *