ಬಸವಮಾರ್ಗದಲ್ಲಿ ಯೋಗ ದಿನಾಚರಣೆ

ಮೈಸೂರು : ನಗರದ ಹೆಬ್ಬಾಳದಲ್ಲಿ ಇರುವ ಬಸವಮಾರ್ಗ ಫೌಂಡೇಷನ್‌ನಲ್ಲಿ ಭಾನುವಾರ ವಿಶ್ವ ಯೋಗದಿನ ಆಚರಿಸಲಾಯಿತು. ಕೇಂದ್ರದ ಹೊರಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿಯರಾದ ಎಂ.ಕಲಾವತಿ, ತೇಜಸ್ವಿನಿ ಹಾಗೂ ಶುಭಾ ಅವರ ನೇತೃತ್ವದಲ್ಲಿ ಶಿಬಿರಾರ್ಥಿಗಳು ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿದರು.

ಪ್ರಾರ್ಥನೆ ಮುಖಾಂತರ ಆರಂಭವಾದ ಸಾಮೂಹಿಕ ಯೋಗಾಭ್ಯಾಸದಲ್ಲಿ ಮೊದಲಿಗೆ ಕುತ್ತಿಗೆ ವ್ಯಾಯಾಮ, ಸೊಂಟದ ಚಲನೆ, ಕಾಲು ಗಂಟಿನ ಚಲನೆಗಳನ್ನು ಮಾಡಿಸಲಾಯಿತು. ಬಳಿಕ ನಿಂತು ಮಾಡುವ ಯೋಗಾಸನದಲ್ಲಿ ತಾಡಾಸನ, ವೃಕ್ಷಾಸನ ಪಾದಹಸ್ತಾಸನ, ಅರ್ಧಚಕ್ರಾಸನ, ತ್ರಿಕೋನಾಸನ ಅಭ್ಯಾಸ ಮಾಡಿಸಲಾಯಿತು. ಕುಳಿತು ಮಾಡುವ ಆಸನದಲ್ಲಿ ಭದ್ರಾಸನ, ಅರ್ಧ ಉಷ್ಟ್ರಾಸನ, ಶಶಾಂಕಾಸನ, ವಕ್ರಾಸನ ಮಾಡಿಸಲಾಯಿತು. ಹೊಟ್ಟೆ ಮೇಲೆ ಮಲಗಿ ಮಾಡುವ ಆಸನಗಳಲ್ಲಿ ಭುಜಂಗಾಸನ, ಶಲಭಾಸನ, ಮಕರಾಸನ, ಸೇತುಬಂಧಾಸನ, ಪವನಮುಕ್ತಾಸನ ಹಾಗೂ ಶವಾಸನಗಳನ್ನು ಮಾಡಿಸಲಾಯಿತು. ಪ್ರಾಣಾಯಾಮ ವಿಭಾಗದಲ್ಲಿ ಮೊದಲಿಗೆ ಕಪಾಲಭಾತಿ, ನಾಡಿಶೋಧನ, ಭ್ರಾಮರಿ ಪ್ರಾಣಯಾಮಗಳನ್ನು ಮಾಡಿಸಲಾಯಿತು. ಅಂತಿಮವಾಗಿ ಧ್ಯಾನದ ಅಭ್ಯಾಸ, ಸಂಕಲ್ಪ, ಶಾಂತಿಮಂತ್ರದೊಂದಿಗೆ ಯೋಗಾಭ್ಯಾಸವನ್ನು ಸಮಾಪ್ತಿಗೊಳಿಸಲಾಯಿತು.

ಈ ವೇಳೆ ಬಸವಮಾರ್ಗ ಫೌಂಡೇಷನ್ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಧಾರಿಸುವ ಪ್ರಾಚೀನ ಭಾರತೀಯ ಅಭ್ಯಾಸವಾಗಿದೆ. ಆಸನಗಳು ದೇಹವನ್ನು ಸದೃಢವಾಗಿ ಇಟ್ಟರೆ, ಧ್ಯಾನ ಮತ್ತು ಪ್ರಾಣಾಯಾಮವು ಮನಸ್ಸು ಮತ್ತು ಭಾವನೆಗಳನ್ನು ಆರೋಗ್ಯವನ್ನಾಗಿ ಇಡುತ್ತದೆ. ಆ ಮೂಲಕ ಯೋಗವು ಒತ್ತಡ ಮತ್ತು ಆತಂಕವನ್ನು ನಿವಾರಿಸಿ ಏಕಾಗ್ರತೆಯನ್ನು ಸುಧಾರಿಸುತ್ತದೆ. ಕಳೆದ ಐದಾರು ವರ್ಷಗಳಿಂದ ನಾನು ಕೂಡ ಯೋಗಭ್ಯಾಸವನ್ನು ಮಾಡಲಾಗುತ್ತಿದ್ದು, ಬಸವಮಾರ್ಗ ಸಂಸ್ಥೆಯಲ್ಲೂ ಯೋಗ, ಧ್ಯಾನ ಮತ್ತು ಪ್ರಾಣಾಯಾಮವನ್ನು ಒಂದು ಚಿಕಿತ್ಸೆ ರೂಪದಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯವಂತ ಜೀವನ ಮಾಡಬೇಕೆಂದು ಸಲಹೆ ನೀಡಿದರು.

ಉದ್ಯಮಿ ಎಚ್.ಎನ್.ರವಿಕುಮಾರ್ ಮಾತನಾಡಿ, ನಿಯಮಿತ ಯೋಗಾಭ್ಯಾಸವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಅತ್ಯುತ್ತಮವಾದ ಮಾರ್ಗವಾಗಿದೆ. ಇದು ನಮ್ಯತೆ, ಬಲ ಮತ್ತು ಸಮತೋಲನವನ್ನು ಹೆಚ್ಚಿಸುವುದಲ್ಲದೆ, ಒತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸ್ನಾಯುಗಳ ಬಲವನ್ನು ಹೆಚ್ಚಿಸುತ್ತದೆ, ದೇಹದ ಭಂಗಿಯನ್ನು ಸುಧಾರಿಸುತ್ತದೆ ಮತ್ತು ದೀರ್ಘಕಾಲದ ನೋವುಗಳನ್ನು ಕಡಿಮೆ ಮಾಡುತ್ತದೆ. ಧ್ಯಾನ ಮತ್ತು ಉಸಿರಾಟದ ನಿಯಂತ್ರಣದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ ಮತ್ತು ಆತಂಕ ದೂರವಾಗುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯಪೂರ್ಣ ಜೀವನಕ್ಕೆ ಯೋಗ ಅಗತ್ಯವಾಗಿ ಬೇಕಾಗಿದೆ ಎಂದು ತಿಳಿಸಿದರು.

ಯೋಗ ಶಿಕ್ಷಕಿ‌ ಕಲಾವತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನಸಿಕ ಕಾಯಿಲೆಗಳು ಹಲವು ಬಗೆಯಲ್ಲಿ ಕಾಡುತ್ತಿವೆ. ಅನಾರೋಗ್ಯಕರ ಜೀವನಕ್ರಮ, ಅನಾರೋಗ್ಯಕರ ಆಹಾರ ಕ್ರಮ ಮತ್ತು ವಿಶೇಷವಾಗಿ ಉದ್ಯೋಗದಲ್ಲಿ ಅತಿಯಾದ ಒತ್ತಡಗಳು ಉದ್ವೇಗ ಮತ್ತು ಖಿನ್ನತೆಗಳಿಗೆ ಕಾರಣವಾಗುತ್ತಿವೆ.
ಮಾನಸಿಕ ತೊಂದರೆಗಳಿಗೆ ಯೋಗಾಭ್ಯಾಸವನ್ನು ನಿತ್ಯದ ಕ್ರಮವನ್ನಾಗಿಸುವ ಮೂಲಕ ಯಾವುದೇ ಅಡ್ಡಪರಿಣಾಮವಿಲ್ಲದ ಹಾಗೂ ಪರಿಣಾಮಕಾರಿಯಾದ ಪರಿಹಾರವನ್ನು ಪಡೆಯಬಹುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *