ಯೋಗವನ್ನು ಪ್ರೋತ್ಸಾಹಿಸಿ ಬೆಳೆಸಿದವರು ಮೈಸೂರಿನ ಯದುವಂಶದ ಅರಸರು.

ಪ್ರಾಚೀನ ಭಾರತದ ಪರಂಪರೆಯ ಅತಿ ಮಹತ್ವದ ಕೊಡುಗೆ ಎಂದರೆ ಅದು ಯೋಗ. ಯೋಗ ದೇಹ ಮತ್ತು ಮನಸನ್ನು ಒಳಗೊಂಡಿದೆ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಬಾಂಧವ್ಯವೇ ಯೋಗ. ಅಂತಾರಾಷ್ಟ್ರೀಯ ಮಟ್ಟದಲ್ಲಿ 2015 ರಲ್ಲಿ ಜೂನ್ 21 ಅನ್ನು ವಿಶ್ವ ಯೋಗ ದಿನವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ ಬಳಿಕ ಪ್ರತಿವರ್ಷ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಮೈಸೂರಿನಲ್ಲಿ ಪ್ರತಿ ವರ್ಷ ಯೋಗ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗುತ್ತಿದೆ. ಒಂದು ಬಾರಿ ವಿಶ್ವ ದಾಖಲೆ ಮಾಡಲಾಗಿದೆ. ಜೊತೆಗೆ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಆ ನಂತರ ಮೈಸೂರಿನಲ್ಲಿ ಯೋಗ ಕಲಿಕೆಗೆ ಹೆಚ್ಚಿನ ಬೇಡಿಕೆ ಬಂದಿದೆ. ಪ್ರತಿ ವರ್ಷ ನಾನಾ ದೇಶಗಳಿಂದ ಯೋಗ ಕಲಿಯಲೆಂದೆ ಸಾವಿರಾರು ವಿದೇಶಿಗರು ಮೈಸೂರಿಗೆ ಬರುತ್ತಾರೆ.

ಮೈಸೂರು : ಯೋಗ 6000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಸಾಂಸ್ಕ್ರತಿಕ ನಗರಿ ಮೈಸೂರಿನ ಯೋಗಕ್ಕೆ ನೂರಾರು ವರ್ಷದ ಇತಿಹಾಸವಿದೆ. ಯೋಗವನ್ನು ಪ್ರೋತ್ಸಾಹಿಸಿ ಬೆಳೆಸಿದವರು ಮೈಸೂರಿನ ಯದುವಂಶದ ಅರಸರು.

ಅರಮನೆಯ ದಾಖಲೆಗಳ ಪ್ರಕಾರ, ಸರಿ ಸುಮಾರು 200 ಹೆಚ್ಚು ವರ್ಷಗಳಿಂದ, ಮೈಸೂರು ರಾಜ ಮನೆತನವು ಪ್ರಾಚಿನ ಯೋಗ ವಿದ್ಯೆಯನ್ನು ಪ್ರೋತ್ಸಾಹಿಸಿಕೊಂಡು ಬಂದಿದೆ. ಮೈಸೂರಿನ ಅರಸರಾದ ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರ್ ಅವರು ರಚಿಸಿರುವ “ವಿದ್ವತ್ಪೂರ್ಣ ಪುಸ್ತಕ ಶ್ರೀತತ್ತ್ವನಿಧಿಯಲ್ಲಿ” ಯೋಗಾದ 122 ಆಸನಗಳ ವಿವರಣೆಯನ್ನು ದಾಖಲಿಸಲಾಗಿದೆ. ಈ ಪುಸ್ತದ ಪ್ರಕಾರ ಮೈಸೂರು ಸಾಮ್ರಾಜ್ಯದಲ್ಲಿ ಯೋಗಕ್ಕೆ 225 ವರ್ಷಗಳಷ್ಟು ಹಿಂದಿನ ಪ್ರಾಚೀನ ಇತಿಹಾಸವಿರುವುದು ಸ್ಪಷ್ಟವಾಗುತ್ತದೆ.

ನಾಲ್ವಡಿ ಅವರಿಂದ ಯೋಗಕ್ಕೆ ಯೋಗ

ರಾಜಶ್ರೀ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರಿಂದ ಯೋಗಕ್ಕೆ‌ ಯೋಗ ಬಂದಿತು ಎಂದರೆ ಅತಿಶಯೋಕ್ತಿಯಾಗಲಾರದು.
ನಾಲ್ವಡಿ ಅವರು ರಾಜಮನೆತನದ ಸದಸ್ಯರು ಮತ್ತು ಸಾರ್ವಜನಿಕರಿಗೆ ಯೋಗವನ್ನು ಕಲಿಸಬೇಕು ಎಂಬ ಮಹತ್ವದ ನಿರ್ಧಾರವನ್ನು ಕೈಗೊಂಡರು. ಅದರ ಪರಿಣಾಮ ಮೈಸೂರಿನಲ್ಲಿ ಯೋಗಶಾಲೆಗಳನ್ನು ಪ್ರಾರಂಭ ಮಾಡಿದರು. ಆ ಮೂಲಕ, ಯೋಗ ಶಿಕ್ಷಣ ಪ್ರಚಾರಕ್ಕೆ ಮೈಸೂರಿನಲ್ಲಿ ಭದ್ರ ಬುನಾದಿ ಹಾಕಿದರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು.

ಆಧುನಿಕ ಯೋಗದ ಪಿತಾಮಹ ತಿರುಮಲೈ ಕೃಷ್ಣಮಚಾರ್ಯರು

ನಾಲ್ವಡಿ ಅವರ ಅಣತಿಯಂತೆ ಮೈಸೂರು ಅರಮನೆಯಲ್ಲಿ ಯೋಗಶಾಲೆಯನ್ನು ಪ್ರಾರಂಭಿಸಿ ಯೋಗಾಭ್ಯಾಸವನ್ನು ಕಲಿಸಲು ಮುಂದಾದ ತಿರುಮಲೈ ಕೃಷ್ಣಮಾಚಾರ್ಯರನ್ನು ಆಧುನಿಕ ಯೋಗದ ಪಿತಾಮಹ ಎಂದು ಪರಿಗಣಿಸಲಾಗಿದೆ. ತಿರುಮಲೈ ಕೃಷ್ಣಮಾಚಾರ್ಯರು ಹಠ ಯೋಗವನ್ನು ಅಭಿವೃದ್ಧಿಪಡಿಸಿದರು ಮತ್ತು ಮೈಸೂರು ನಗರದಲ್ಲಿ ಮೊತ್ತ ಮೊದಲ ಹಠ ಯೋಗ ಶಾಲೆಯನ್ನು ಪ್ರಾರಂಭಿಸಿದರು. ಅವರ ಯೋಗ ಶಾಲೆಯ ಶಿಷ್ಯರಾಗಿದ್ದ ಅವರ ಮಗ ದೇಶಿಕಾಚಾರ್ ಅವರು ಯೋಗದಲ್ಲಿ ವಿನಿಯೋಗ ವಿಧಾನವನ್ನು ಅಭಿವೃದ್ಧಿಪಡಿಸಿದರು.
ಬಿ.ಕೆ.ಎಸ್. ಅಯ್ಯಂಗಾರ್ ಅವರು ಕೃಷ್ಣಮಾಚಾರ್ಯರ ಶಿಷ್ಯವೃಂದದಲ್ಲಿನ ಮತ್ತೊಬ್ಬ ಪ್ರಸಿದ್ಧ ವಿದ್ಯಾರ್ಥಿಯಾಗಿದ್ದರು. ಅವರು ಇಂದು ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಅಯ್ಯಂಗಾರ್ ಯೋಗವನ್ನು ಅಭಿವೃದ್ಧಿಪಡಿಸಿ ವಿಶ್ವಕ್ಕೆ ಪರಿಚಯಿಸಿದರು. ಅಷ್ಟಾಂಗ ಯೋಗವನ್ನು ಅಭಿವೃದ್ಧಿಪಡಿಸಿದ ಖ್ಯಾತಿ ಮೈಸೂರಿನ ಮತ್ತೊಬ್ಬ ಪ್ರಸಿದ್ಧ ಯೋಗ ಗುರು ಕೆ.ಪಟ್ಟಾಭಿ ಜೋಯಿಸ್ ಅವರಿಗೆ ಸಲ್ಲುತ್ತದೆ. ಹೀಗೆ ಈ ಮಹಾಯೋಗ ಗುರುಗಳು ಆರಂಭಿಸಿದ ಯೋಗ ಶಿಕ್ಷಣ ಇಂದು ವಿಶ್ವ ಮಟ್ಟದಲ್ಲಿ ಮೈಸೂರಿಗೆ ಪ್ರಸಿದ್ದಿ ತಂದು ಕೊಟ್ಟಿದೆ.

ಮೈಸೂರು ಯೋಗಕ್ಕೆ ಮನಸೋತ ವಿದೇಶಿಗರು

ಮೈಸೂರು ಯೋಗದ ರಾಜಧಾನಿ ಎಂದರೆ ತಪ್ಪಾಗಲಾರದು. ಮೈಸೂರು ಯೋಗ ಶಿಕ್ಷಕರ ಅತಿ ದೊಡ್ಡ ನಗರ ಎಂದರೆ ಅತಿಶಯೋಕ್ತಿಯಲ್ಲ. ಏಕೆಂದರೆ ಪ್ರತಿ ವರ್ಷ ಸಾವಿರಾರು ಮಂದಿ ಇಲ್ಲಿ ಯೋಗವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡುತ್ತಾರೆ. ಅದಕ್ಕಾಗೆ ಮೈಸೂರಿಗೆ ಆಗಮಿಸುತ್ತಾರೆ. ಅದರಲ್ಲಿ ವಿದೇಶಿಗರು ಅಗ್ರಗಣ್ಯರು. ವಿದೇಶಿಗರು ಮೈಸೂರಿನಲ್ಲಿ ಯೋಗ ಶಿಕ್ಷಣ ಪಡೆದು. ವಿಶ್ವದಾದ್ಯಂತ ಪ್ರಚಾರ ಪಡಿಸುತ್ತಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರು ವಿಶ್ವದ ‘ಅಷ್ಟಾಂಗ ಯೋಗ ರಾಜಧಾನಿ’ ಎಂದು ಪ್ರಸಿದ್ಧವಾಗಿದೆ. ಶ್ರೀ ಕೃಷ್ಣಮಾಚಾರ್ಯರು ಮತ್ತು ಪಟ್ಟಾಭಿ ಜೋಯಿಸ್ ಅವರಂತಹ ಯೋಗ ಗುರುಗಳ ಪರಂಪರೆಯಿಂದ ಪ್ರೇರಿತರಾಗಿ, ಅಮೆರಿಕ, ಯುರೋಪ್ ಮತ್ತು ಆಗ್ನೇಯ ಏಷ್ಯಾದ ಸಾವಿರಾರು ವಿದೇಶಿಗರು ಮೈಸೂರಿನ ಗೋಕುಲಂ, ವಿಜಯನಗರ, ಕುವೆಂಪು ನಗರ, ಸರಸ್ವತಿ ಪುರಂ ದಂತಹ ಬಡಾವಣೆಗಳಲ್ಲಿ ನೆಲೆಸಿ ಯೋಗದ ಆಳವಾದ ಅಭ್ಯಾಸ ಮತ್ತು ತರಬೇತಿಯನ್ನು ಪಡೆಯುತ್ತಿದ್ದಾರೆ.

ಅಷ್ಟಾಂಗ ಯೋಗ ಪರಂಪರೆ

ವಿದೇಶಿಗರು ಮೈಸೂರು ಯೋಗದತ್ತ ಆಕರ್ಷಿತರಾಗಲು ಹಲವು ಪ್ರಮುಖ ಕಾರಣಗಳು ಇವೆ. ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಅಷ್ಟಾಂಗ ಯೋಗದ ಪದ್ಧತಿಯು ಉಸಿರಾಟ, ದೈಹಿಕ ಸಮತೋಲನ ಮತ್ತು ಶಿಸ್ತಿಗೆ ಒತ್ತು ನೀಡುತ್ತದೆ. ವಿದೇಶಿಗರು ಈ ಮೂಲ ಶೈಲಿಯನ್ನು ಕಲಿಯಲು ಇಲ್ಲಿಗೆ ಬರುತ್ತಾರೆ. ವಿದೇಶಿಗರು ಕೇವಲ ಪ್ರವಾಸಿಗರಾಗಿ ಬಾರದೆ, 200 ರಿಂದ 500 ಗಂಟೆಗಳ ಪ್ರಮಾಣೀಕೃತ ಶಿಕ್ಷಕರ ತರಬೇತಿ ಕೋರ್ಸ್‌ಗಳನ್ನು ಮೈಸೂರು ಯೋಗ ನಗರಿಯಾದ ಇತಿಹಾಸ ಪಡೆಯಲು ತಿಂಗಳುಗಳ ಕಾಲ ತಂಗುತ್ತಾರೆ. ಯೋಗದ ಜೊತೆಗೆ, ಭಾರತೀಯ ಸಂಸ್ಕೃತಿ, ಆಯುರ್ವೇದ ಚಿಕಿತ್ಸೆಗಳು, ಸಂಗೀತ ಮತ್ತು ಧ್ಯಾನದ ಅನುಭವ ಪಡೆಯಲು ವಿದೇಶಿಗರು ಬರುತ್ತಾರೆ.

*ಪ್ರಧಾನಿ ಮೋದಿ ಭೇಟಿ ಬಳಿಕ‌ ಹೆಚ್ಚಾಯಿತು ಕ್ರೇಸ್..

2015ರಲ್ಲಿ ಜೂನ್ 21 ಅನ್ನು ವಿಶ್ವ ಯೋಗ ದಿನವಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ ಬಳಿಕ ಯೋಗಕ್ಕೆ ವಿಶ್ವಾದಂತ್ಯ ಮನ್ನಣೆ ದೊರೆಯಿತು. ಆ ಮೂಲಕ ಪ್ರತಿ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಕರೆತರಲು ಹಲವು ವರ್ಷಗಳಿಂದ ನಡೆಯುತ್ತಿದ್ದ ಪ್ರಯತ್ನ 2022ರಲ್ಲಿ ನೆರವೇರಿತು. ಪ್ರಧಾನಿ ಮೋದಿ ಅವರು ಮೈಸೂರು ಅರಮನೆ ಆವರಣದಲ್ಲಿ ಮಾಡಿದ ಯೋಗ ಪ್ರದರ್ಶನ ಇಡೀ ವಿಶ್ವದಲ್ಲಿ ಸದ್ದು ಮಾಡಿತು. ಮೈಸೂರಿನ ಯೋಗ ಮತ್ತೊಮ್ಮೆ ಎಲ್ಲೆಡೆ ಗಮನ ಸೆಳೆಯಿತು. ಮೋದಿ ಅವರು ಭಾಗವಹಿಸಿದ ನಂತರ ನಗರದ ಯೋಗ ಕೇಂದ್ರಗಳಿಗೆ ಯೋಗ ಕಲಿಯಲು ವಿದೇಶದಿಂದ ಬರುವವರ ಸಂಖ್ಯೆ ಹೆಚ್ಚಾಯಿತು. ಇಲ್ಲಿನ ಯೋಗ ಶಿಕ್ಷಕರಿಗೂ ವಿದೇಶದಲ್ಲಿ ಬೇಡಿಕೆ ಹೆಚ್ಚಾಯಿತು. ಸಂಸ್ಕೃತಿಕ ನಗರಿಯ ಪ್ರವಾಸೋದ್ಯಮ ಅಭಿವೃದ್ಧಿಗೂ ಯೋಗ ಅನುಕೂಲವಾಯಿತು.

ವಿದೇಶಿಗರನ್ನು ಆಕರ್ಷಿಸಿದ ಗಿನ್ನಿಸ್ ದಾಖಲೆ

ಮೈಸೂರು ಯೋಗ ಕ್ಷೇತ್ರದಲ್ಲಿ ಹಲವು ದಾಖಲೆಗಳನ್ನು ಹೊಂದಿದೆ. 2017ರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಮೈಸೂರಿನ ರೇಸ್‌ ಕೋರ್ಸ್ ಮೈದಾನದಲ್ಲಿ 55,506 ಜನರು ಒಟ್ಟಿಗೆ ಯೋಗ ಪ್ರದರ್ಶನ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿತ್ತು.

ಯೋಗ್ಯಕ್ಕೆ ಮಣ್ಣನೆ ತಂದ ಮೋದಿ

ಪ್ರತಿವರ್ಷ ಯೋಗದ ದಿನಾಚರಣೆಯು ಯೋಗ, ಧ್ಯಾನ, ಸಭೆಗಳು ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗ ದಿನಾಚರಣೆ ಆಚರಣೆ ಬಗ್ಗೆ 2014 ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿಯವರು ಪ್ರಸ್ತಾಪವನ್ನು ಮಂಡಿಸಿದ್ದರು. ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಮೊದಲ ಬಾರಿ ಅಧಿಕಾರ ವಹಿಸಿಕೊಂಡ ವರ್ಷವೇ 2014ರ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗದ ಮಹತ್ವವನ್ನು ಸಾರಿದರು. ಯೋಗವು ವಿಶ್ವ ಶಾಂತಿಗೂ ಪೂರಕ ಎನ್ನುವುದನ್ನು ವಿಶ್ವ ಸಂಸ್ಥೆಯ ಸದಸ್ಯರ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಟ್ಟರು. ಆ ವೇಳೆ ವಿಶ್ವ ಸಂಸ್ಥೆಯ ಮುಂದೆ ಯೋಗ ದಿನ ಆಚರಣೆಯ ಪ್ರಸ್ತಾವನೆಯನ್ನು ಮುಂದಿಟ್ಟರು. ಇದನ್ನು ವಿಶ್ವ ಸಂಸ್ಥೆ ಮಾನ್ಯ ಮಾಡಿತು.
ನಂತರ ತನ್ನ ಎಲ್ಲ ಸದಸ್ಯ ರಾಷ್ಟ್ರಗಳ ಅಭಿಪ್ರಾಯ ಸಂಗ್ರಹಿಸಿ, 2015ರಲ್ಲಿ ಜೂನ್‌ 21ನ್ನು ವಿಶ್ವ ಯೋಗ ದಿನ ಎಂದು ಘೋಷಿಸಿತು.

ಜೂನ್‌ 21ರಂದೇ ಏಕೆ?:
ಜೂನ್ 21 ರಂದೆ ಅಂತಾರಾಷ್ಟ್ರೀಯ ಯೋಗ ದಿನ ಆರಿಸಲು ಒಂದು ವಿಶೇಷತೆ ಇದೆ. ಇಡೀ ವರ್ಷದಲ್ಲಿ ಜೂನ್‌ 21ರಂದು ಭೂಮಿಯ ಉತ್ತರ ಭಾಗದಲ್ಲಿ ಅಧಿಕ ದಿನ ಇರುತ್ತದೆ. ಅಂದರೆ ಅಂದು ಉತ್ತರ ಭಾಗದಲ್ಲಿ ಹಗಲು ದೀರ್ಘಾವಧಿಯಾಗಿರುತ್ತದೆ. ದಕ್ಷಿಣದಲ್ಲಿ ಹಗಲಿನ ಅವಧಿ ಕಡಿಮೆ ಇರುತ್ತದೆ. ಅಂದು ಸೂರ್ಯ ತನ್ನ ಪಥವನ್ನು ದಕ್ಷಿಣದತ್ತ ಬದಲಿಸುತ್ತಾನೆ. ಅಂದು ಸಾಮಾನ್ಯವಾಗಿ ಹುಣ್ಣಿಮೆಯಾಗಿದ್ದು, ಗುರುಪೂರ್ಣಿಮ ದಿನವಾಗಿರುತ್ತದೆ. ಇದು ಯೋಗ ಮಾಡಲು ಅಥವಾ ಆರಂಭಿಸಲು ಸೂಕ್ತ ದಿನವಾಗಿದೆ.

ಎಚ್.ಪಿ.ನವೀನ್ ಕುಮಾರ್
ಯೋಗ ಶಿಕ್ಷಕರು/ಪತ್ರಕರ್ತರು

Leave a Reply

Your email address will not be published. Required fields are marked *