ಕ್ರೀಡೆಯಿಂದ ಆರೋಗ್ಯ ವೃದ್ಧಿ: ಬಸವಮಾರ್ಗ ಫೌಂಡೇಷನ್ ಸಂಸ್ಥಾಪಕ ಎಸ್. ಬಸವರಾಜು

  • ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾ ಬಳಗ ಅರ್ಜುನ ಕಪ್

ಮೈಸೂರು : ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯ, ಮಾನಸಿಕ ದೃಢತೆ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದೈನಂದಿನ ಜೀವನದಲ್ಲಿ ಆಟೋಟಗಳನ್ನು ರೂಢಿಸಿಕೊಳ್ಳಬೇಕು ಎಂದು ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಎಸ್. ಬಸವರಾಜು ಸಲಹೆ ನೀಡಿದರು.

ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾ ಬಳಗದಿಂದ ಕುವೆಂಪುನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 3ನೇ ವರ್ಷದ ಅರ್ಜುನ ಕಪ್ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕರ ವಾಲಿಬಾಲ್/ ಖೋ, ಖೋ ಹಾಗೂ ಬಾಲಕಿಯರ ಥ್ರೋ ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಂದು ಮಕ್ಕಳಲ್ಲೂ ಅಗಾಧವಾದ ಪ್ರತಿಭೆ ಇದೆ. ಅದನ್ನು ವ್ಯಕ್ತಪಡಿಸಲು ಕ್ರೀಡಾಕೂಟಗಳು ಮುಖ್ಯ ವೇದಿಕೆಯಾಗಿದೆ. ನಗರ ಹಾಗೂ ಗ್ರಾಮೀಣ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದೇ ಈ ಕ್ರೀಡಾಕೂಟದ ಮುಖ್ಯ ಉದ್ದೇಶವಾಗಿದೆ. ಇಲ್ಲಿನ ಪ್ರತಿಭೆಗಳು ಕ್ರೀಡೆಯಲ್ಲಿ ಭಾಗವಹಿಸಿ ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ಮತ್ತು ಕೀರ್ತಿ ತರಬೇಕು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚಬೇಕು. ಕ್ರೀಡೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ. ಇಲ್ಲಿ ಸ್ಪರ್ಧಿಸುವುದು ಮುಖ್ಯ. ಇಂತಹ ಕ್ರೀಡಾ ವೇದಿಕೆಗಳು ಸಿಕ್ಕಾಗ ಸದ್ಬಳಕೆ ಮಾಡಿಕೊಳ್ಳಬೇಕು. ಓದಿನ ಸರಿಸಮಾನವಾಗಿ ಕ್ರೀಡೆಯಲ್ಲೂ ತೊಡಗಬೇಕು. ಮಕ್ಕಳು ಕ್ರೀಡಾಸ್ಪೂರ್ತಿ ತೋರಿಸಬೇಕು ಎಂದು ಸಲಹೆ ನೀಡಿದರು.

ಜೀವನದಲ್ಲಿಯ ಉದ್ದೇಶ, ಗುರಿ ಈಡೇರಿಸಿಕೊಳ್ಳಲು ಆರೋಗ್ಯವಂತ ಮನಸ್ಸು ಮತ್ತು ಶರೀರದ ಅವಶ್ಯಕತೆ ಇದೆ. ಆರೋಗ್ಯ ವೃದ್ಧಿಸಿಕೊಳ್ಳಲು ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ. ಕ್ರೀಡೆಯಲ್ಲಿ ಕ್ರೀಡಾ ಮನೋಭಾವದಿಂದ ಪಾಲ್ಗೋಳ್ಳಬೇಕು. ಕ್ರೀಡೆ ಕೇವಲ ಮನೋರಂಜನೆ ಮಾತ್ರವಲ್ಲ, ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮನ್ನು ಸದೃಢರನ್ನಾಗಿ ಮಾಡುತ್ತದೆ. ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರಲು ಸಾಧ್ಯ ಎಂಬ ದಾರ್ಶನಿಕರ ವಾಣಿಯಂತೆ ಮನುಷ್ಯನ ದೇಹ ಮತ್ತು ಮನಸ್ಸುಗಳು ದೃಢತೆ ಕಾಯ್ದುಕೊಳ್ಳಲು ಕ್ರೀಡಾ ಚಟುವಟಿಕೆ ರೂಢಿಸಿಕೊಳ್ಳುವುದು ಉತ್ತಮ. ಇದರಿಂದ ಪ್ರತಿಯೊಬ್ಬರೂ ಒಳ್ಳೆಯ ಆರೋಗ್ಯ ಹೊಂದಬಹುದು ಎಂದು ಅಭಿಪ್ರಾಯಪಟ್ಟರು.

ಸಂಜೆ ನಡೆಸದ ಸಮಾರೋಪ ಸಮಾರಂಭದಲ್ಲಿ ಶಾಸಕ ಶ್ರೀವತ್ಸ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಶುಭಕೋರಿದರು. ಕಾರ್ಯಕ್ರಮದಲ್ಲಿ ಸೈನಿಕ ಅಕಾಡೆಮಿ ಸಂಸ್ಥಾಪಕ ಸಿ.ಎಂ.ಶ್ರೀಧರ್, ದೈಹಿಕ ಶಿಕ್ಷಣ ಪರಿಷತ್ತಿನ ಕೃಷ್ಣ, ಸ್ವಾಮಿ, ಮಧು, ಮಲ್ಲೇಶ್, ಅನಿಲ್, ವೆಂಕಟೇಶ್, ಮಂಜು, ನಾಗೇಂದ್ರ, ಗಂಗೇಶ್, ರವಿ, ಚಂದ್ರ, ಶಿವಕುಮಾರ್ ಇತರರು ಇದ್ದರು.

*ವಿಜೇತರು *
ವಾಲಿಬಾಲ್ (ಬಾಲಕರ ವಿಭಾಗ) : ಪೊಲೀಸ್ ಪಬ್ಲಿಕ್ ಶಾಲೆ(ಪ್ರ), ಜಿಎಸ್‌ಎಸ್‌ಎಸ್(ದ್ವಿ), ವಿಜಿಕೆ ಮುಳ್ಳುರು(ತೃ), ಪಶ್ಚಿಮ ಲಯನ್ಸ್, ಸೇವಾನಿಕೇತನ(ನಾ). ಖೋಖೋ ಪಂದ್ಯಾವಳಿ : ಈಸ್ಟ್ ವೆಸ್ಟ್ ಇಂಟರ್ ನ್ಯಾಷಿನಲ್ ಸ್ಕೂಲ್(ಪ್ರ), ಎಎಂಇಎಸ್ ಹೆಬ್ಬಾಳ್ (ದ್ವಿ), ಕುವೆಂಪುನಗರ ಕೆಪಿಸಿ(ತೃ), ವಿವಿಬಿಎಂ ಶ್ರೀ(ನಾ). ಥ್ರೋ ಬಾಲ್ ಬಾಲಕಿಯರ ವಿಭಾಗ : ಬೋಗಾದಿ ಕ್ರಿಸ್ಟ್ ಪಬ್ಲಿಕ್ ಶಾಲೆ(ಪ್ರ), ಸಿದ್ಧಾರ್ಥನಗರ ಜಿಎಸ್‌ಎಸ್‌ಎಸ್(ದ್ವಿ), ತಾಂಡವಪುರ ಕ್ರಿಸ್ಟ್ ಪಬ್ಲಿಕ್ ಶಾಲೆ (ತೃ), ಪ್ರಮಥಿ ಹಿಲ್ ವ್ಹೀವ್ ಅಕಾಡೆಮಿ(ನಾ)

Leave a Reply

Your email address will not be published. Required fields are marked *