ಚಾಮರಾಜನಗರ: ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್‌ಗಳ ವೈಯಕ್ತಿಕ ಮತ್ತು ಆರ್ಥಿಕ ಯೋಗಕ್ಷೇಮದ ಬಗ್ಗೆ ಸಮಾಜ ಹಾಗೂ ಸರ್ಕಾರ ಸೂಕ್ತ ಗಮನಹರಿಸುವ ಅಗತ್ಯವಿದೆ ಎಂದು ಚಾಮರಾಜನಗರ ಜಿಲ್ಲಾ ಗ್ರಾಹಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಡಾ. ಗಣೇಶ್ ದೀಕ್ಷಿತ್ ಹೇಳಿದರು.
ನಗರದ ಶ್ರೀ ಶಿವಕುಮಾರ ಸ್ವಾಮಿ ಭವನದಲ್ಲಿ ಚಾಮರಾಜನಗರ ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಯಾಮೆರಾ ಕಣ್ಣಿನ ಮೂಲಕ ಪ್ರಪಂಚದ ಸೌಂದರ್ಯ ಹಾಗೂ ಜನರ ಜೀವನದ ಅಮೂಲ್ಯ ಕ್ಷಣಗಳನ್ನು ಸೆರೆಹಿಡಿಯುವ ಛಾಯಾಗ್ರಾಹಕರ ಬದುಕು ಹೊರನೋಟಕ್ಕೆ ವರ್ಣಮಯವಾಗಿ ಕಾಣಿಸಿದರೂ, ಅವರ ವೃತ್ತಿಯಲ್ಲಿ ಹಲವು ಸವಾಲುಗಳಿವೆ. ಆರೋಗ್ಯ ಮತ್ತು ಜೀವ ವಿಮೆ, ಆರ್ಥಿಕ ಭದ್ರತೆ, ಋತುಮಾನದ ಕೆಲಸದ ಸಂಕಷ್ಟ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಅಗತ್ಯವಿರುವ ದುಬಾರಿ ಉಪಕರಣಗಳನ್ನು ಖರೀದಿಸುವುದು ಪ್ರಮುಖ ಸವಾಲುಗಳಾಗಿವೆ ಎಂದರು.
ಛಾಯಾಗ್ರಾಹಕರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಆರೋಗ್ಯ ಮತ್ತು ಜೀವ ವಿಮೆ ಸೌಲಭ್ಯ ಕಲ್ಪಿಸಬೇಕು. ರಾಜ್ಯ ಮಟ್ಟದಲ್ಲಿ ಛಾಯಾಗ್ರಾಹಕರಿಗಾಗಿ ಪ್ರತ್ಯೇಕ ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪನೆಯಾದರೆ ಪಿಂಚಣಿ, ತುರ್ತು ವೈದ್ಯಕೀಯ ನೆರವು ಹಾಗೂ ಮಕ್ಕಳ ಶಿಕ್ಷಣಕ್ಕೆ ಸಹಕಾರ ದೊರೆಯಲಿದೆ. ಆಧುನಿಕ ಕ್ಯಾಮೆರಾ ಹಾಗೂ ಉಪಕರಣಗಳ ಖರೀದಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಅಥವಾ ಸಬ್ಸಿಡಿ ಸೌಲಭ್ಯ ನೀಡುವ ಮೂಲಕ ವೃತ್ತಿಪರ ಬೆಳವಣಿಗೆಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಸ್ವಾಮಿ ಮಾತನಾಡಿ, ಛಾಯಾಗ್ರಾಹಕರು ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಕಾರ್ಮಿಕ ಇಲಾಖೆಯಿಂದ ದೊರೆಯುವ ಕಾರ್ಮಿಕ ಕಾರ್ಡ್‌ಗಳನ್ನು ಪಡೆದು ಅದರ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಂಘದ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ
ಅಧ್ಯಕ್ಷರು ಚಾಮರಾಜನಗರ ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋ ಗ್ರಾಫರ್ ಸಂಘ ಕೆ.ಎಂ. ಕುಮಾರ್ ಕಂಠಿ ಅವರು ಮಾತನಾಡಿ, ವಾರ್ಷಿಕ ಮಹಾಸಭೆಯಲ್ಲಿ ಸಂಘದ ವತಿಯಿಂದ ಈವರೆಗೆ ನಡೆದ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳ ಕುರಿತು ವಿವರಿಸಿದರು. ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಹಾಗೂ ಸಂಕಷ್ಟದಲ್ಲಿದ್ದ ಛಾಯಾಗ್ರಾಹಕರ ಕುಟುಂಬಕ್ಕೆ ₹1 ಲಕ್ಷ ಧನಸಹಾಯ ನೀಡಿದ ಕಾರ್ಯದ ಬಗ್ಗೆ ತಿಳಿಸಿದರು.
ಎಲ್ಲಾ ಛಾಯಾಗ್ರಾಹಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ಅನಗತ್ಯ ಚರ್ಚೆ ಹಾಗೂ ಜಗಳಗಳಿಗೆ ಆಸ್ಪದ ನೀಡದೆ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಛಾಯಾಗ್ರಾಹಕರು ಸಂಘದ ಸದಸ್ಯತ್ವ ಪಡೆದುಕೊಂಡು, ಸಂಘದ ಮೂಲಕ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ ತಾಲೂಕು ಗೌರವಾಧ್ಯಕ್ಷ ಅನಂತನಾರಾಯಣ, ಎಂ.ಕೆ. ಪ್ರಕಾಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್‌ಗಳು ಭಾಗವಹಿಸಿದ್ದರು.
