ಪತ್ರಕರ್ತ ಶ್ರೀನಿವಾಸ ಎ. ಕೊಳ್ಳೇಗಾಲ ವಿಧಿವಶ

ಮೈಸೂರು: ಪತ್ರಕರ್ತ ಶ್ರೀನಿವಾಸ ಎ. ಕೊಳ್ಳೇಗಾಲ(30) ವಿಧಿವಶರಾಗಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನವರಾದ ಶ್ರೀನಿವಾಸ್ ‘ಕನ್ನಡ ದುನಿಯಾ’ದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಕೊಳ್ಳೇಗಾಲ, ಮೈಸೂರಿನಲ್ಲಿ ಶಿಕ್ಷಣ ಪಡೆದ ಶ್ರೀನಿವಾಸ್ ನಂತರ ಮೈಕಲ್ ಕನ್ನಡ ನ್ಯೂಸ್ ವೆಬ್ಸೈಟ್ ನಲ್ಲಿ ಕಾರ್ಯನಿರ್ವಹಿಸಿದ್ದರು. ಅತ್ಯುತ್ತಮ ಸ್ಪೋರ್ಟ್ಸ್ ಅಬ್ಸರ್ವರ್ ಆಗಿದ್ದ ಅವರು ತಮ್ಮದೇ ಶೈಲಿಯ ಕ್ರೀಡಾ ಬರವಣಿಗೆ ಮೂಲಕ ಗಮನಸೆಳೆದಿದ್ದರು.

ಒನ್ ಇಂಡಿಯಾ ಕನ್ನಡದಲ್ಲಿ ಸೋಷಿಯಲ್ ಮೀಡಿಯಾ ಎಕ್ಸಿಕ್ಯೂಟಿವ್ ಆಗಿ ವೃತ್ತಿ ಆರಂಭಿಸಿ, ನಂತರ ಮೈಖೇಲ್ ಕನ್ನಡ ಮತ್ತು ಕನ್ನಡ ಫಿಲ್ಮಿಬೀಟ್ನಲ್ಲಿ ಸಬ್ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ನಂತರ ಮೈಸೂರಿನ ಆಂದೋಲನ ದಿನಪತ್ರಿಕೆಯ ಡಿಜಿಟಲ್ ಟೀಮ್ ಲೀಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಕ್ರೀಡಾ ಮಾತ್ರವಲ್ಲದೆ ವಿವಿಧ ಕ್ಷೇತ್ರಗಳ ಸುದ್ದಿ ವಿಶ್ಲೇಷಣೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದರು. ಪ್ರವಾಸೋದ್ಯಮ, ಟ್ರೆಂಡಿಂಗ್ ಟಾಪಿಕ್, ಪ್ರಚಲಿತ ಬೆಳವಣಿಗೆಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಫಿಲ್ಮಿ ಬೀಟ್, ಒನ್ ಇಂಡಿಯಾದಲ್ಲೂ ಕಾರ್ಯನಿರ್ವಹಿಸಿದ್ದ ಶ್ರೀನಿವಾಸ್ ಬಳಿಕ ಕನ್ನಡ ದುನಿಯಾ ಬಳಗ ಸೇರಿಕೊಂಡಿದ್ದರು. ಬಳಿಕ ಬೆಂಗಳೂರು ತೊರೆದು ಮೈಸೂರಿನಲ್ಲಿ ನೆಲೆಸಿದ್ದರು. ಅವಿವಾಹಿತರಾಗಿದ್ದ ಅವರು ತಂದೆ, ತಾಯಿ ಮತ್ತು ಕಿರಿಯ ಸಹೋದರನನ್ನು ಅಗಲಿದ್ದಾರೆ.
ಕೆಲಸ ಮಾಡಿದ ಸ್ಥಳಗಳಲ್ಲಿ ಸ್ನೇಹ ಪರ ವ್ಯಕ್ತಿತ್ವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಹಠಾತ್ ನಿಧನದಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಇಂದು ಸಂಜೆ ಕೊಳ್ಳೇಗಾಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಶ್ರೀನಿವಾಸ್ ಎ. ಅವರ ನಿಧನಕ್ಕೆ ಕನ್ನಡ ದುನಿಯಾ ಬಳಗ ಕಂಬನಿ ಮಿಡಿಯುತ್ತದೆ.

Leave a Reply

Your email address will not be published. Required fields are marked *