ನೀಟ್ ಅಕ್ರಮ ; ಕೇಂದ್ರದ ಬೇಜವಾಬ್ದಾರಿತನ

  • ಕೆ.ಆರ್.ಎಸ್. ಪಕ್ಷದ ಎಂ.ರವಿಕುಮಾರ್ ಖಂಡನೆ

ಚಾಮರಾಜನಗರ : ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದಿರುವ ಹಗರಣವು ಕೇಂದ್ರ ಸರ್ಕಾರದ ಬೇಜವಾಬ್ದಾರಿತನ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಕೋರರೊಂದಿಗಿನ ಅದರ ಅಪವಿತ್ರ ಮೈತ್ರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಕೆಆರ್ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ರವಿಕುಮಾರ್ ಖಂಡಿಸಿದ್ದಾರೆ.
ಇದು ಕೇವಲ ಒಂದು ಪರೀಕ್ಷೆಯ ವೈಫಲ್ಯವಲ್ಲ, ಬದಲಾಗಿ ದೇಶದ ಲಕ್ಷಾಂತರ ಬಡ, ಮಧ್ಯಮ ವರ್ಗದ ಮತ್ತು ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಗೆ ಮಾಡಿದ ಅನ್ಯಾಯವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಭ್ರಷ್ಟಾಚಾರದ ಅಡ್ಡೆಯಾಗಿ ಮಾರ್ಪಟ್ಟಿದೆ. ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದರೂ, ಕೇಂದ್ರ ಸರ್ಕಾರ ಆ ಸಂಸ್ಥೆಯ ಬೆನ್ನಿಗೆ ನಿಂತಿರುವುದು ಅದರ ನಾಚಿಕೆಗೇಡಿನ ಪರಮಾವಧಿಯಾಗಿದೆ ಎಂದು ದೂರಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ, ಕೋಚಿಂಗ್ ಸೆಂಟರ್‌ಗಳ ದಲ್ಲಾಳಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ಕೂಟವೊಂದು ಸೇರಿ ಮೆರಿಟ್ ವಿದ್ಯಾರ್ಥಿಗಳ ಭವಿಷ್ಯವನ್ನು ಹರಾಜಿಗೆ ಇಟ್ಟಿವೆ. ಹಣವಿದ್ದವರಿಗೆ ಮಾತ್ರ ವೈದ್ಯಕೀಯ ಸೀಟು ಎಂಬ ವಾತಾವರಣವನ್ನು ನಿರ್ಮಿಸಿ, ಸಾಮಾಜಿಕ ನ್ಯಾಯವನ್ನು ಬುಡಮೇಲು ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಇಡೀ ಪ್ರಹಸನದ ನೈತಿಕ ಹೊಣೆ ಹೊತ್ತು, ಕೇಂದ್ರ ಶಿಕ್ಷಣ ಸಚಿವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ಪ್ರಧಾನಿಯವರೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಈ ಹಗರಣದ ಹಿಂದೆ ಇರುವ ಕಾಣದ ಕೈಗಳನ್ನು ಮಟ್ಟಹಾಕಲು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಭ್ರಷ್ಟಾಚಾರದ ಕೂಪವಾಗಿರುವ ಎನ್ಟಿಎ ಯನ್ನು ವಿಸರ್ಜಿಸಬೇಕು ಅಥವಾ ಆಮೂಲಾಗ್ರವಾಗಿ ಬದಲಾವಣೆ ತಂದು, ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಕೇಂದ್ರ ಸರ್ಕಾರವು ಈ ಕೂಡಲೇ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸದಿದ್ದರೆ, ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸುತ್ತಿದ್ದೇವೆ.

Leave a Reply

Your email address will not be published. Required fields are marked *