- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗ

ಮೈಸೂರು : ವಿಶ್ವ ತಂಬಾಕು ರಹಿತ ದಿನದ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸರ್ವೇಕ್ಷಣ ಘಟಕ ವತಿಯಿಂದ ಭಾನುವಾರ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಆಶ್ರಮ ಶಾಖೆಯಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷ ಮೇ 31 ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ತಂಬಾಕು ಸೇವನೆಯಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳು, ಸಾವುನೋವುಗಳು ಮತ್ತು ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಈ ದಿನವನ್ನು ಆಯೋಜಿಸುತ್ತದೆ. ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಜನರನ್ನು ಚಟಮುಕ್ತರನ್ನಾಗಿ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ತಂಬಾಕು ಸೇವನೆಯು ಕ್ಯಾನ್ಸರ್, ಹೃದಯಾಘಾತ, ಶ್ವಾಸಕೋಶದ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ. ತಂಬಾಕು ಸೇವನೆಯು ವ್ಯಕ್ತಿಯ ಆರೋಗ್ಯದ ಜೊತೆಗೆ ಅವರ ಕುಟುಂಬಕ್ಕೂ ಆರ್ಥಿಕ ಹಾಗೂ ಮಾನಸಿಕ ನೋವನ್ನು ಉಂಟುಮಾಡುತ್ತದೆ. ಆದ್ದರಿಂದ ಇಂದೇ ತಂಬಾಕಿಗೆ ವಿದಾಯ ಹೇಳಿ, ಆರೋಗ್ಯಕರ ಜೀವನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಪವರಪಾಯಿಂಟ್ ಮೂಲಕ ವಿಷಯವನ್ನು ಮನವರಿಕೆ ಮಾಡಿಕೊಟ್ಟರು.
ಜಿಲ್ಲಾ ಆಸ್ಪತ್ರೆಯ ತಂಬಾಕು ವ್ಯಸನಮುಕ್ತ ಕೇಂದ್ರದ ಆಪ್ತ ಸಮಾಲೋಚಕ, ವಿಜಯ ಕುಮಾರ್ ಮಾತನಾಡಿ, ತಂಬಾಕು ಸೇವನೆ ಮತ್ತು ಅದರ ಸೇವನೆಯು ಶ್ವಾಸಕೋಶ, ಧ್ವನಿಪೆಟ್ಟಿಗೆಯ ಬಾಯಿ, ಅನ್ನನಾಳ, ಗಂಟಲು, ಮೂತ್ರಕೋಶ, ಮೂತ್ರಪಿಂಡ, ಯಕೃತ್ತು, ಹೊಟ್ಟೆ, ಮೇದೋಜ್ಜೀರಕ ಗ್ರಂಥಿ, ಕೊಲೊನ್ ಮತ್ತು ಗರ್ಭಕಂಠದಂತಹ ಹಲವು ರೀತಿಯ ಕ್ಯಾನ್ಸರ್‌ಗಳಿಗೆ ಮತ್ತು ತೀವ್ರವಾದ ಮೈಲೋಯ್ಡ್ ಲ್ಯುಕೇಮಿಯಾಕ್ಕೆ ಪ್ರಮುಖ ಕಾರಣವಾಗಿದೆ . ತಂಬಾಕು ಸೇವನೆಯಿಂದಾಗಿ ಪ್ರತಿ ವರ್ಷ 1 ಕೋಟಿಗೂ ಹೆಚ್ಚು ಜನರು ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ತಂಬಾಕು ಆರೋಗ್ಯದ ಮೇಲೆ ಮಾತ್ರವಲ್ಲದೆ ಪರಿಸರದ ಮೇಲೂ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಸಂಪನ್ಮೂಲ ವ್ಯಕ್ತಿ, ವಸಂತ ಕುಮಾರ್ ಮೈಸೂರು ಮಠ್ ಮಾತನಾಡಿ, ತಂಬಾಕು ಆರೋಗ್ಯದ ಮೇಲೆ ಮಾತ್ರವಲ್ಲದೆ ಪರಿಸರದ ಮೇಲೂ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ಪ್ರಪಂಚದಾದ್ಯಂತ, ವಾರ್ಷಿಕವಾಗಿ ಸುಮಾರು 35 ಲಕ್ಷ ಹೆಕ್ಟೇರ್ ಭೂಮಿಯನ್ನು ತಂಬಾಕು ಕೃಷಿಗೆ ಬಳಸಲಾಗುತ್ತದೆ. ತಂಬಾಕು ಕೃಷಿಯಿಂದ ಉಂಟಾಗುವ ವಾರ್ಷಿಕ ಅರಣ್ಯನಾಶವು 2 ಲಕ್ಷ ಹೆಕ್ಟೇರ್ ಎಂದು ಅಂದಾಜಿಸಲಾಗಿದೆ. ಮೆಕ್ಕೆಜೋಳ ಬೆಳೆಯುವುದು ಮತ್ತು ಜಾನುವಾರು ಮೇಯಿಸುವಿಕೆಯಂತಹ ಇತರ ಕೃಷಿ ಚಟುವಟಿಕೆಗಳಿಗೆ ಹೋಲಿಸಿದರೆ ತಂಬಾಕು ಕೃಷಿಭೂಮಿಗಳು ಜೈವಿಕ ಉತ್ಪಾದಕತೆಯ ನಷ್ಟವಾಗುತ್ತದೆ. ತಂಬಾಕು ಉತ್ಪಾದನೆಯು ಪರಿಸರ ವ್ಯವಸ್ಥೆಗಳ ಮೇಲೆ ಗಮನಾರ್ಹವಾಗಿ ಹೆಚ್ಚಿನ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ. ಇದರ ಜೊತೆಗೆ, ತಂಬಾಕು ಬೆಳೆಯಲು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಭಾರೀ ಬಳಕೆಯ ಅಗತ್ಯವಿರುತ್ತದೆ, ಇದು ಮಣ್ಣಿನ ಫಲವತ್ತತೆಯ ಕ್ಷೀಣತೆಗೆ ಕಾರಣವಾಗಬಹುದು ಮತ್ತು ಇತರ ಆಹಾರ ಬೆಳೆಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್. ಬಸವರಾಜು ಮಾತನಾಡಿ,ತಂಬಾಕು ಸೇವನೆ ಮತ್ತು ಧೂಮಪಾನವು ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರುತ್ತದೆ, ಇದು ಈ ಕೆಳಗಿನ ಮಾರಕ ಕಾಯಿಲೆಗಳಿಗೆ ಕಾರಣವಾಗಬಹನಮ್ಮ ಈ ನಿಟ್ಟಿನಲ್ಲಿ ಮದ್ಯಪಾನದೊಂದಿಗೆ ದೂಮಪಾನದ ಚಟವೂ ನಮ್ಮಲ್ಲಿ ಇರುತ್ತದೆ. ಆದರಿಂದ ಆರೋಗ್ಯಕ್ಕೆ ಮಾರಕವಾಗಿರುವ ವ್ಯಸನ ಗಳನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದರು.