
ಚಾಮರಾಜನಗರ : ಮೈಸೂರಿನ ಜೆಎಸ್ ಎಸ್ ಮಹಾ ವಿದ್ಯಾಪೀಠವು ಚಾಮರಾಜನಗರ ಜಿಲ್ಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಿಗೆ ನೀಡುವ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ವರದಿಗಾರರಾದ ಪ್ರಕಾಶ್ ಬೆಲ್ಲದ್ ಅವರು ಆಯ್ಕೆಯಾಗಿದ್ದಾರೆ.
ಜಿಲ್ಲೆಯ ಗಡಿಭಾಗದ ತಾಳವಾಡಿ ತಾಲ್ಲೂಕಿನ ಸೊತ್ತನಪುರಂ ಗ್ರಾಮದ ಪ್ರಕಾಶ್ ಬೆಲ್ಲದ್ 1996 ರಲ್ಲಿ ಪತ್ರಿಕಾರಂಗ ಪ್ರವೇಶಿಸಿ ವಿವಿಧ ಪತ್ರಿಕೆಗಳಲ್ಲಿ 30 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ಧಾರೆ. ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಚಾಮರಾಜನಗರದಲ್ಲಿ ವಾಸವಿದ್ದು, ಸ್ಥಳೀಯ ರೇಷ್ಮೆನಾಡು ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಆರಂಭಿಸಿದ ಪ್ರಕಾಶ್ ಅವರು ನಂತರ ಆಂದೋಲನ, ಪ್ರಜಾನುಡಿ, ಉಷಾಕಿರಣ, ಜನಮಿತ್ರ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ವರ್ತಮಾನ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾದ ಪ್ರಕಾಶ್ ಬೆಲ್ಲದ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಅಧ್ಯಕ್ಷರಾದ ಆರ್.ಎನ್.ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸದಸ್ಯರು ಅಭಿನಂದಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ
ಮಹಾವಿದ್ಯಾಪೀಠದ ಸಹಯೋಗದಲ್ಲಿ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವು ಮೇ 5 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ನಡೆಯಲಿದೆ.
ಸಮಾರಂಭವನ್ನು ಮೈಸೂರಿನ ಹಿರಿಯ ಪತ್ರಕರ್ತರಾದ ಸಿ.ಕೆ.ಮಹೇಂದ್ರ ಉದ್ಘಾಟಿಸಲಿದ್ದು, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡುವರು. ಸಂಘದ ಜಿಲ್ಲಾಧ್ಯಕ್ಷರಾದ ಆರ್.ಎನ್. ಸಿದ್ದಲಿಂಗಸ್ವಾಮಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜೆಎಸ್ಎಸ್ ಮಹಾವಿದ್ಯಾಪೀಠದ ತೋಟಗಾರಿಕೆ ವಿಭಾಗದ ನಿರ್ದೇಶಕರಾದ ಎನ್.ಎಂ.ಶಿವ ಶಂಕರಪ್ಪ ಭಾಗವಹಿಸುವರು.
ಸಮಾರಂಭಕ್ಕೆ ಜಿಲ್ಲೆಯ ಎಲ್ಲ ಪತ್ರಕರ್ತರು ಹಾಗೂ ಪ್ರಕಾಶ್ ಬೆಲ್ಲದ್ ಅವರ ಹಿತೈಷಿಗಳು ಆಗಮಿಸಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರಕಟಣೆಯಲ್ಲಿ ಕೋರಿದೆ.