- ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರ ಸಹಕಾರಿ
- ಮಾಜಿ ಸಂಸದ ಅಭಿಮತ

ಮೈಸೂರು : ಬೇಸಿಗೆ ಶಿಬಿರಗಳು ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರತರುವ, ಲವಲವಿಕೆ ಹೆಚ್ಚಿಸುವ ಮತ್ತು ಸೃಜನಾತ್ಮಕ ಕಲಿಕೆಗೆ ವೇದಿಕೆ ಕಲ್ಪಿಸುವ ಅವಕಾಶಗಳಾಗಿವೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಬಸವಮಾರ್ಗ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಒಂದು ತಿಂಗಳ ಉಚಿತ ವಸತಿ ಸಹಿತ ಬೇಸಿಗೆ ಶಿಬಿರಕ್ಕೆ ಶುಕ್ರವಾರ ಭೇಟಿ ನೀಡಿ ಅವರು ಮಾತನಾಡಿದರು.

ಮಕ್ಕಳು ವರ್ಷವಿಡೀ ಪಾಠ-ಪರೀಕ್ಷೆಗಳಲ್ಲಿ ಮುಳುಗಿರುತ್ತಾರೆ, ಬೇಸಿಗೆ ಶಿಬಿರಗಳಲ್ಲಿ ಕಲೆ, ಕರಕುಶಲ, ನೃತ್ಯ, ಸಂಗೀತ, ಮತ್ತು ನಾಟಕದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮನಸ್ಸಿಗೆ ಮುದ ಪಡೆಯಬಹುದು. ಶಿಬಿರದಲ್ಲಿ ಹೊಸ ವಿಷಯಗಳನ್ನು ಕಲಿಯುವುದು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಅವಕಾಶವಿರುತ್ತದೆ. ಬಡ ಮಕ್ಕಳಿಗೆ ಇದು ಕಲಿಕೆಯ ಸದಾವಕಾಶವಾಗಿದೆ ಎಂದರು.

ಬಿಜೆಪಿ ಮುಖಂಡ ಕಿರಣ್ ಗೌಡ ಮಾತನಾಡಿ, ಮಕ್ಕಳು ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳ ಆಸಕ್ತಿ ಮತ್ತು ವಯಸ್ಸಿಗೆ ಅನುಗುಣವಾದ ಶಿಬಿರಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಗರಿಷ್ಠ ಪ್ರಯೋಜನ ಪಡೆಯಬಹುದು ಎಂದರು.

ಬಸವಮಾರ್ಗ ಫೌಂಡೇಶನ್ ಅಧ್ಯಕ್ಷ ಎಸ್.ಬಸವರಾಜು ಮಾತನಾಡಿ, 1 ತಿಂಗಳ ವಸತಿ ಸಹಿತ ಬೇಸಿಗೆ ಶಿಬಿರದಲ್ಲಿ ರಾಜ್ಯದ ನಾನಾ ಊರುಗಳಿಂದ ಮಕ್ಕಳು ಬಂದಿದ್ದಾರೆ. ಜತೆಗೆ ಮೈಸೂರಿನ ಸುತ್ತಲಿನ ಪ್ರದೇಶದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಮಕ್ಕಳು ಮೊಬೈಲ್‌ಗಳಲ್ಲಿ ಮುಳುಗಿ ಸಮಯವನ್ನು ವ್ಯರ್ಥ ಮಾಡುತ್ತಿರುವ ಬಗ್ಗೆ ನಮಗೆ ಅನೇಕ ಕರೆಗಳು ಬರುತ್ತಿತ್ತು. ಆ ನಿಟ್ಟಿನಲ್ಲಿ ಈ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು ಈ ನಿಟ್ಟಿನಲ್ಲಿ ಸಂಸ್ಥೆ ಆನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಬಹುಮಾನ ವಿತರಣೆ : ಇದೆ ಸಂದರ್ಭದಲ್ಲಿ ಮೊಬೈಕ್ ಅಡಿಕ್ಷನ್ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಎರಡು ವಿಭಾಗದಲ್ಲಿ ಗೇರ್ ಸೈಕಲ್, ಸ್ಮಾರ್ಟ್ ವಾಚ್ ಕೊಡುಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕ ರಮೇಶ್ ಇತರರು ಇದ್ದರು.