ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮರ್ಪಕವಾಗಿ ಸೌಲಭ್ಯಗಳನ್ನು ತಲುಪಿಸಿ

  • ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು. ನಿಸಾರ್ ಅಹಮದ್
ಚಾಮರಾಜನಗರ: ವಿವಿಧ ಇಲಾಖೆಗಳಲ್ಲಿ ಇರುವ ಸೌಲಭ್ಯಗಳನ್ನು ನಿಯಮಾನುಸಾರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮರ್ಪಕವಾಗಿ ಅಧಿಕಾರಿಗಳು ತಲುಪಿಸುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು. ನಿಸಾರ್ ಅಹಮದ್ ಅವರು ಸೂಚನೆ ನೀಡಿದರು. 

  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

  ಸರ್ಕಾರದ ಸೌಲಭ್ಯಗಳು ಅಲ್ಪಸಂಖ್ಯಾತ ಸಮುದಾಯ ವರ್ಗಗಳಿಗೆ ಯಾವುದೇ ವಿಳಂಬ ಮಾಡದೇ ನೀಡಬೇಕು. ಅಲ್ಪಸಂಖ್ಯಾತರಿಗೆ ಯೋಜನೆಗಳನ್ನು ಹೇಗೆ ತಲುಪಿಸಲಾಗುತ್ತಿದೆ ಎಂಬ ಬಗ್ಗೆ ಅಲ್ಪಸಂಖ್ಯಾತ ಆಯೋಗ ಪರಿಶೀಲಿಸುತ್ತಿದೆ. ವಸತಿ, ಶಿಕ್ಷಣ, ಸಾಲ ಸೌಲಭ್ಯಗಳು, ಕೌಶಲ್ಯ ಅಭಿವೃದ್ದಿ, ಸೇರಿದಂತೆ ವಿವಿಧ ಇಲಾಖೆಗಳಿಂದ ನೀಡಬೇಕಿÀರುವ ಸವಲತ್ತುಗಳು ಕಾಲಮಿತಿಯೊಳಗೆ ಅಲ್ಪಸಂಖ್ಯಾತರಿಗೆ ಲಭ್ಯವಾಗಬೇಕು ಎಂದು ಅಧ್ಯಕ್ಷರು ತಿಳಿಸಿದರು. 

   ಅಂಗನವಾಡಿ, ಶಾಲೆಗಳಲ್ಲಿ ಎಷ್ಟು ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಕ್ಕಳು ಇದ್ದಾರೆ ಎಂಬ ಕರಾರು ಮಾಹಿತಿಯನ್ನು ಸಂಗ್ರಹಿಸಬೇಕು. ಶಾಲೆ, ಅಂಗನವಾಡಿಗಳಿಗೆ ದಾಖಲಾಗುತ್ತಿರುವ ಬಗ್ಗೆ ಹೆಚ್ಚಿನ ಮುತುವರ್ಜಿಯಿಂದ ಪರಿಶೀಲಿಸಬೇಕು. ಕಡ್ಡಾಯ ಶಿಕ್ಷಣ ಹಕ್ಕನ್ನು ಜಾರಿಗೊಳಿಸಿದ್ದು, ಅಲ್ಪಸಂಖ್ಯಾತರು ಶಿಕ್ಷಣದಿಂದ ವಂಚಿತರಾಗಬಾರದು.  ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಬಾರದು ಎಂದರು.

   ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆಗಳಿವೆ. ಸಾಕಷ್ಟು ಸಂಖ್ಯೆಯಲ್ಲಿರುವ ಕಟ್ಟಡ ಕಾರ್ಮಿಕರು, ವಾಹನ ಚಾಲಕರು, ಅಸಂಘಟಿತ ವಲಯಕ್ಕೆ ಸೇರಿದ ಕಾರ್ಮಿಕ ವರ್ಗದವರಿಗೆ ಸರ್ಕಾರದ ಯೋಜನೆಗಳು ಉಪಯೋಗವಾಗಬೇಕಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ ಪ್ರಯೋಜನ ಪಡೆಯಲು ಸೌಲಭ್ಯ ಶಿಬಿರಗಳನ್ನು ಆಯೋಗದ ಸ್ಥಳೀಯ ಸದಸ್ಯರ ಸಹಕಾರ ಸಲಹೆ ಪಡೆದು ಆಯೋಜಿಸಬೇಕು. ಜನ ಸಮುದಾಯ ಇರುವ ಸ್ಥಳಗಳಲ್ಲಿಯೇ ಕಾರ್ಮಿಕ ಇಲಾಖೆಯ ಕಾರ್ಡುಗಳನ್ನು ವಿತರಿಸಿ ಸವಲತ್ತುಗಳನ್ನು ಪಡೆಯಲು ನೆರವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 

  ಬ್ಯಾಂಕುಗಳಲ್ಲಿ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಸಾಲ ನೀಡುವಲ್ಲಿ ಮುಂದಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ಇದುವರೆಗೆ ಎಷ್ಟು ಮಂದಿಗೆ ಸಾಲ ನೀಡಲಾಗಿದೆ ಎಂದು ಪ್ರಶ್ನಿಸಿದ ಆಯೋಗದ ಅಧ್ಯಕ್ಷರು ವಿದ್ಯಾರ್ಥಿಗಳ ಶೈಕ್ಷಣಿಕ ಸಾಲದ ಅರ್ಜಿಗಳು ಇನ್ನೂ ಹಾಗೆ ಬ್ಯಾಂಕುಗಳಲ್ಲೇ ಉಳಿದಿದೆ ಎಂಬ ದೂರುಗಳು ಬಂದಿವೆ. ಶೀಘ್ರವೇ ಸಾಲ ಸೌಲಭ್ಯಗಳನ್ನು ನೀಡಬೇಕು. ಎಷ್ಟು ಜನರಿಗೆ ಸಾಲ ವಿತರಿಸಲಾಗಿದೆ ಎಂಬ ಮಾಹಿತಿಯನ್ನು ತಮಗೆ ಕಳುಹಿಸಿಕೊಡುವಂತೆ ನಿರ್ದೇಶನ ನೀಡಿದರು. 

  ಬೀದಿ ಬದಿ ವ್ಯಾಪಾರಿಗಳಿಗೆ ನೀಡಲಾಗುತ್ತಿರುವ ಸಾಲ ಸೌಲಭ್ಯ ಅರ್ಹರೆಲ್ಲರಿಗು ಸಿಗಬೇಕು. ವಸತಿ ಸೌಕರ್ಯಗಳನ್ನು ಅನುಷ್ಠಾನಗೊಳಿಸುತ್ತಿರುವ ಇಲಾಖೆಗಳು ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ತ್ವರಿತವಾಗಿ ಫಲಾನುಭವಿಗಳಿಗೆ ಯೋಜನೆ ತಲುಪಿಸಬೇಕು. ಯಾವುದಾದರು ಸಮಸ್ಯೆಗಳಿದ್ದರೆ ಫಲಾನುಭವಿಗಳನ್ನು ಭೇಟಿ ಮಾಡಿ ಮನೆಗಳ ನಿರ್ಮಾಣ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು. ನಿಸಾರ್ ಅಹಮದ್ ಅವರು ತಿಳಿಸಿದರು. 

  ಇದೇ ವೇಳೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಕಾರ್ಮಿಕ ಇಲಾಖೆಯ ಸೌಲಭ್ಯಗಳನ್ನು ತಲುಪಿಸಲು ಆಯಾ ತಾಲೂಕಿನಲ್ಲಿಯೇ ಶಿಬಿರಗಳನ್ನು ಏರ್ಪಡಿಸಬೇಕು. ಜನರಿಗೆ ಇಲಾಖೆಯಿಂದ ಆಗುವ ಅನುಕೂಲಗಳ ಬಗ್ಗೆ ವ್ಯಾಪಕವಾಗಿ ತಿಳಿಸಿ ಕೊಡಬೇಕು. ಅಧಿಕಾರಿಗಳು ಅಲ್ಪಸಂಖ್ಯಾತರ ಸಮುದಾಯಕ್ಕೆ ಇರುವ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದರು. 

   ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪಕಾರ್ಯದರ್ಶಿ ಶೃತಿ, ಡಿವೈಎಸ್‍ಪಿ ಸ್ನೇಹರಾಜ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿಗಳಾದ ಡಾ. ಮಾಜುದ್ದೀನ್ ಖಾನ್, ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಆಯೋಗದ ನಾಮ ನಿರ್ದೇಶಿತ ಸದಸ್ಯರಾದ ಅಬ್ದಲ್ ನವೀದ್, ನಾಗರತ್ನ ರಾಜ್, ಭಾಸ್ಕರ್ ಪಂಗಿರಾಜ್, ಡಾ. ಎಂ.ಎಸ್. ಮೊಹಮ್ಮದ್ ನೂರುದ್ದೀನ್, ಇಸಾನ್ ಜಾವೇದ್, ಝಿಶಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಸುರೇಶ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೆಶಕರಾದ ಚಂದ್ರಪಾಟಿಲ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಗುಡ್ಡಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸುರೇಖ, ಇನ್ನಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *