- ಸಿದ್ದರಾಮಯ್ಯ, ಹೆಚ್.ಸಿ.ಮಹದೇವಪ್ಪ ಎ.ಆರ್.ಕೃಷ್ಣಮೂರ್ತಿಗೆ ಸಚಿವಸ್ಥಾನ ಕೊಡಿಸುವ ಮೂಲಕ ಬಿ.ರಾಚಯ್ಯನವರ ಋಣ ತೀರಿಸಲಿ
ಜಿಲ್ಲೆಯಲ್ಲಿ ದಲಿತರೆ ನಿರ್ಣಾಯಕವಾಗಿರುವುದರಿಂದ ದಲಿತ ಸಚಿವರನ್ನೇ ಮಾಡಬೇಕು.
ಚಾಮರಾಜನಗರ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ತಾ.ಪಂ.ಮಾಜಿ ಅಧ್ಯಕ್ಷ ಆರ್.ಮಹದೇವು ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ಮುಖ್ಯಮಂತ್ರಿ ಆಗುವ ಎಲ್ಲ ಅವಕಾಶಗಳು ಇದ್ದಂತಹ ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯ ಅವರು ಸುಪುತ್ರ ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರು 3 ಶಾಸಕರಾಗಿದ್ದು, ಜಿಲ್ಲೆಯ ನಾಡಿಮಿಡಿತ ಅರಿತಿದ್ದು, ಸಾಕಷ್ಟು ಅನುಭವ ಹೊಂದಿರುವ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಕೇಂದ್ರ, ರಾಜ್ಯ ವರಿಷ್ಠರನ್ನು ಒತ್ತಾಯಿಸಿದರು.
ಅಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಅವರು ನಾವು ಬಿ.ರಾಚಯ್ಯನವರ ಪ್ರಾಡಕ್ಟ್ ಎಂದು ಹೇಳುತ್ತಾರೆ. ಅದೇ ರೀತಿಯಲ್ಲಿ ನೂತನ ಸಚಿವ ಸಂಪುಟದಲ್ಲಿ
ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರನ್ನು ಸಚಿವರಾಗಿ ಮಾಡುವ ಮೂಲಕ ಬಿ.ರಾಚಯ್ಯನವರ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಚಾಮರಾಜನಗರ ಜಿಲ್ಲೆಯಾಗಿ ಸುಮಾರು 30 ವರ್ಷಗಳು ತುಂಬಿದರು ಜಿಲ್ಲೆಯಲ್ಲಿ ದಲಿತರು ಸಚಿವರಾಗಿಲ್ಲ. ದಲಿತರು ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದ್ದು ಪ್ರತಿ ಚುನಾವಣೆಯಲ್ಲೂ ದಲಿತರೇ ನಿರ್ಣಾಯಕ ಪಾತ್ರ ವಹಿಸಿಕೊಂಡು ಬಂದಿದ್ದಾರೆ. ಬಿ.ರಾಚಯ್ಯ ಅವರು ಹಲವು ಇಲಾಖೆಯ ಸಚಿವರಾಗಿ ಜಿಲ್ಲೆಯಲ್ಲಿ ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ನೀಡಿದ್ದಾರೆ. ಆಗಾಗಿ ಅವರ ಪುತ್ರ ಎ.ಆರ್.ಕೃಷ್ಣಮೂರ್ತಿ ಅವರನ್ನು ಸಚಿವರಾಗಿ ಮಾಡಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ತೋಟೇಶ್ ಮಾತನಾಡಿ,.ಎ. ಆರ್.ಕೃಷ್ಣಮೂರ್ತಿ ಅವರು ಶಾಸಕರಾಗಿಯೇ ಕಳೆದ 3 ವರ್ಷದ ಅವಧಿಯಲ್ಲಿ 500 ಕೋಟಿಗೂ ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ನೀರಾವರಿ, ರಸ್ತೆ, ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿದ್ದಾರೆ. ಅವರು ಮಂತ್ರಿಯಾದರೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ, ಜಿಲ್ಲೆಯೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಸಮಿತಿ ಜಿಲ್ಲಾಧ್ಯಕ್ಷ ಹೆಚ್.ವಿ.ಚಂದ್ರು,
ಕೊಳ್ಳೇಗಾಲ ತಾಲೂಕು ಅಧ್ಯಕ್ಷ
ರಾಜೇಂದ್ರ, ತಾ.ಪಂ.ಮಾಜಿ ಸದಸ್ಯ ಹೊಂಗನೂರು ಮಹದೇವು, ಚಾಮುಲ್ ನಿರ್ದೇಶಕ ರೇವಣ್ಣ,
ವಕೀಲ ಮಂಜು, ಹನೂರು ಬ್ಲಾಕ್ ಅಧ್ಯಕ್ಷ ಮುಕುಂದವರ್ಮ ಹಾಜರಿದ್ದರು.