ಚಾಮರಾಜನಗರ ಸಂಚಾರ ಪೊಲೀಸರಿಗೆ ಕಾಂಗರೂ ಕೇರ್ ನಿಂದ ರೇಡಿಯಂಟ್ ಜಾಕೆಟ್ ವಿತರಣೆ

ಚಾಮರಾಜನಗರ: ಕಾಂಗರೂ ಕೇರ್ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಂತಾನಹೀನತಾ ಚಿಕಿತ್ಸಾ ಕೇಂದ್ರವು ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಉಪಕ್ರಮದ ಭಾಗವಾಗಿ ಚಾಮರಾಜನಗರ ಜಿಲ್ಲೆಯ ಸಂಚಾರ ಪೊಲೀಸ್ ಸಿಬ್ಬಂದಿಗೆ ಜಾಕೆಟ್ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಠಿಣ ಹವಾಮಾನ ಮತ್ತು ರಸ್ತೆ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸ್ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಕಾಂಗರೂ ಕೇರ್ ಸಂಸ್ಥೆಯು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗಾಗಲೇ ಬೆಂಗಳೂರು, ಮೈಸೂರು, ರಾಮನಗರ, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿಯೂ ಇಂತಹ ಜಾಕೆಟ್ ವಿತರಣಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಈ ವಿನೂತನ ಉಪಕ್ರಮವನ್ನು ಶ್ಲಾಘಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಅವರು, ಪ್ರತಿಯೊಂದು ಹವಾಮಾನಕ್ಕೂ ಸೂಕ್ತವಾದ ಈ ಜಾಕೆಟ್ಗಳು ಕರ್ತವ್ಯದಲ್ಲಿರುವ ಸಂಚಾರ ಪೊಲೀಸರಿಗೆ ಉಪಯುಕ್ತ ರಕ್ಷಣೆ ನೀಡಲಿವೆ ಎಂದರು. ಈ ಜಾಕೆಟ್ಗಳಲ್ಲಿ ‘3M’ ರಿಫ್ಲೆಕ್ಟಿವ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ರಾತ್ರಿ ವೇಳೆ ಹಾಗೂ ಕಡಿಮೆ ಬೆಳಕಿರುವ ಸಂದರ್ಭಗಳಲ್ಲಿ ಪೊಲೀಸರು ಎದ್ದು ಕಾಣುವಂತೆ ಮಾಡುತ್ತದೆ. ಅಲ್ಲದೆ, ಇವು ಚಳಿ, ಮಳೆ ಹಾಗೂ ಬೇಸಿಗೆಯ ಎಲ್ಲಾ ಸಮಯದಲ್ಲೂ ಧರಿಸಲು ಸೂಕ್ತವಾಗಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಶೇಖರ್ ಸುಬ್ಬಯ್ಯ ಅವರು, ಪೊಲೀಸ್ ಸಿಬ್ಬಂದಿ ಹಾಗೂ ಸಮಾಜದ ಇತರ ವರ್ಗಗಳಿಗೆ ನೆರವಾಗುವ ಇಂತಹ ಸಾಮಾಜಿಕ ಕಾಳಜಿಯ ಚಟುವಟಿಕೆಗಳನ್ನು ಕಾಂಗರೂ ಕೇರ್ ಮುಂಬರುವ ದಿನಗಳಲ್ಲೂ ಮುಂದುವರಿಸಲಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪೊಲೀಸ್ ಸಿಬ್ಬಂದಿಗೆ ಇಂತಹ ಜಾಕೆಟ್ಗಳನ್ನು ವಿತರಿಸಲು ಆಸ್ಪತ್ರೆ ಯೋಜಿಸಿದ್ದು, ಈ ಯೋಜನೆಯ ಮುಂದಿನ ಹಂತವನ್ನು ಮಡಿಕೇರಿ ಜಿಲ್ಲೆಯಲ್ಲಿ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *