ಚಾಮರಾಜನಗರ, ಆಗಸ್ಟ್ 19 (ಕರ್ನಾಟಕ ವಾರ್ತೆ):- ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಅಧಿಕಾರಿಗಳು ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕುಗಳಲ್ಲಿ ದಾಳಿ, ತಪಾಸಣೆ ನಡೆಸಿ 6 ಕಿಶೋರ ಕಾರ್ಮಿಕರನ್ನು ಗುರುತಿಸಿ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರ ವಿರುದ್ಧ ಮೊಕದ್ದಮೆ ಹೂಡಲು ಕ್ರಮ ವಹಿಸಿದ್ದಾರೆ.
ಗುಂಡ್ಲುಪೇಟೆ ಪಟ್ಟಣದ ಇಟ್ಟಿಗೆ ಕಾರ್ಖಾನೆ, ಪೆಟ್ರೋಲ್ ಬಂಕ್, ಚಾಮರಾಜನಗರದ ಲೇಔಟ್ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾಲ್ವರು ಬಾಲಕರು ಹಾಗೂ ಇಬ್ಬರು ಬಾಲಕಿಯರು ಸೇರಿದಂತೆ ಒಟ್ಟು 6 ಕಿಶೋರ ಕಾರ್ಮಿಕರನ್ನು ಗುರುತಿಸಿ ಕೆಲಸದಿಂದ ಬಿಡಿಸಿ ಅವರ ಆರೈಕೆ, ರಕ್ಷಣೆ, ಪೋಷಣೆ ಹಾಗೂ ಪುನರ್ವಸತಿಗಾಗಿ ಬಾಲಮಮದಿರಕ್ಕೆ ದಾಖಲಿಸಿದ್ದಾರೆ.
ಕಿಶೋರ ಕಾರ್ಮಿಕರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ. ಕಿಶೋರ ಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕ್ರಮ ತೆಗೆದುಕೊಳ್ಳಲಾಗಿದೆ.
ದಾಳಿ, ತಪಾಸಣೆ ತಂಡದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಚಂದ್ರಯ್ಯ, ಹಿರಿಯ ಕಾರ್ಮಿಕ ನಿರೀಕ್ಷಕರಾದ ವಿ.ಎಲ್. ಪ್ರಸಾದ್, ಆರ್. ನಾರಾಯಣಮೂರ್ತಿ, ಯೋಜನಾ ನಿರ್ದೇಶಕರಾದ ಎಂ. ಮಹೇಶ್ ಇದ್ದರು.
ಜಿಲ್ಲೆಯಾದ್ಯಂತ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ದುಡಿಮೆಯನ್ನು ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ 18 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ನೇಮಿಸಿಕೊಳ್ಳಬಾರದು. ತಪ್ಪಿದಲ್ಲಿ ಮಾಲೀಕರ ವಿರುದ್ಧ ಬಾಲಕಾರ್ಮಿಕ ನಿಷೇದ ಮತ್ತು ನಿಯಂತ್ರಣ ಕಾಯ್ದೆ ಅನ್ವಯ 20 ಸಾವಿರದಿಂದ 50 ಸಾವಿರ ರೂ. ವರೆಗೆ ದಂಡ ಹಾಗೂ ಆರು ತಿಂಗಳಿಂದ 2 ವರ್ಷದವರೆಗೂ ಸೆರೆವಾಸ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಚಂದ್ರಯ್ಯ ಅವರು ತಿಳಿಸಿದ್ದಾರೆ.