ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟ : ಜಿಲ್ಲಾಧಿಕಾರಿ ಶ್ರೀರೂಪ

ಚಾಮರಾಜನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24ರಂದು ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮತದಾರರ ಪಟ್ಟಿ ವಿಶೆಷ ಸಮಗ್ರ ಪರಿಷ್ಕರಣೆ- 2026ರ ಸಂಬಂಧ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸುವ ಕುರಿತಂತೆ ಮಾನ್ಯತೆ ಪಡೆದ ನೊಂದಾಯಿತ ರಾಜಕೀತ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿ, ಸಹಾಯಕ ನೊಂದಣಾಧಿಕಾರಿ, ತಹಶೀಲ್ದಾರ್ ಕಚೇರಿಗಳು ಹಾಗೂ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಚುರ ಪಡಿಸಲಾಗುತ್ತದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದೆಯೇ, ಇಲ್ಲವೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಬಿ.ಎಲ್.ಎ-2 ರವರ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಜಿಲ್ಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 30ರಿಂದ ಆಗಸ್ಟ್ 17ರವರೆಗೆ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಿ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸ್ವೀಕರಿಸಿ ಅವುಗಳನ್ನು ಗಣಕೀಕರಣಗೊಳಿಸಲಾಗಿದೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,24,616 ಮತದಾರರಿದ್ದು, ಈ ಪೈಕಿ 2,02,670 ಗಣತಿ ನಮೂನೆಗಳನ್ನು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,21,151 ಮತದಾರರಿದ್ದು, ಇದರಲ್ಲಿ 1,96,087 ಗಣತಿ ನಮೂನೆಗಳು, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,17,852 ಮತದಾರರಿದ್ದು, ಈ ಪೈಕಿ 1,94,730 ಗಣತಿ ನಮೂನೆಗಳನ್ನು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,16,605 ಮತದಾರರಿದ್ದು, ಇದರಲ್ಲಿ 1,98,460 ಗಣತಿ ನಮೂನೆಗಳು ಡಿಜಿಟಲೀಕರಣಗೊಳಿಸಲಾಗಿದೆ ಎಂದರು.  

ಜಿಲ್ಲೆಯಲ್ಲಿ 983 ಮತಗಟ್ಟೆಗಳಿದ್ದು, ಒಟ್ಟಾರೆ 8,80,224 ಮತದಾರರಿದ್ದಾರೆ. ಇದರಲ್ಲಿ 7,91,947 ಗಣತಿ ನಮೂನೆಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಗೈರು ಹಾಜರಿ, ಸ್ಥಳಾಂತರ, ಮರಣ ಹೊಂದಿರುವ ಹಾಗೂ ಎರಡು ಕಡೆ ನೋಂದಣಿಯಾಗಿರುವ ಹಾಗೂ ಇತರೆ ಸೇರಿದಂತೆ ಒಟ್ಟು 88,277 ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ 10,312 ಗೈರು ಹಾಜರಿ, 37,855 ಸ್ಥಳಾಂತರ, 31,474 ಮರಣ ಹೊಂದಿದವರು, 8,303 ಎರಡು ಕಡೆ ನೊಂದಣಿಯಾಗಿರುವವರು, ಇತರೆ 333 ಸೇರಿದ್ದಾರೆ ಎಂದು ಹೇಳಿದರು. 

ಹನೂರು ವಿಧಾನಸಭಾ ಕ್ಷೇತ್ರದಲ್ಲಿ 635 ಗೈರು ಹಾಜರಿ, 11,770 ಸ್ಥಳಾಂತರ, 6,536 ಮರಣ ಹೊಂದಿದವರು, 2,965 ಎರಡು ಕಡೆ ನೊಂದಣಿಯಾಗಿರುವವರು, ಇತರೆ 40 ಸೇರಿದಂತೆ 21,946 ಮತದಾರರನ್ನು ಗುರುತಿಸಲಾಗಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 2,440 ಗೈರು ಹಾಜರಿ, 10,474 ಸ್ಥಳಾಂತರ, 10,335 ಮರಣ ಹೊಂದಿದವರು, 1,797 ಎರಡು ಕಡೆ ನೊಂದಣಿಯಾಗಿರುವವರು, ಇತರೆ 18 ಸೇರಿದಂತೆ 25,064 ಮತದಾರರನ್ನು ಗುರುತಿಸಲಾಗಿದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 3,716 ಗೈರು ಹಾಜರಿ, 9,482 ಸ್ಥಳಾಂತರ, 8,073 ಮರಣ ಹೊಂದಿದವರು, 1,778 ಎರಡು ಕಡೆ ನೊಂದಣಿಯಾಗಿರುವವರು, ಇತರೆ 73 ಸೇರಿದಂತೆ 23,122 ಮತದಾರರನ್ನು ಗುರುತಿಸಲಾಗಿದೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 3,521 ಗೈರು ಹಾಜರಿ, 6,129 ಸ್ಥಳಾಂತರ, 6,530 ಮರಣ ಹೊಂದಿದವರು, 1,763 ಎರಡು ಕಡೆ ನೊಂದಣಿಯಾಗಿರುವವರು, ಇತರೆ 202 ಸೇರಿದಂತೆ 18,145 ಮತದಾರರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ. ಚಿಕ್ಕ ಮಹದೇವು, ಎಸ್. ಬಾಲಸುಬ್ರಮಣ್ಯ, ಎಚ್.ಎಸ್. ತೋಂಟದಾರ್ಯಸ್ವಾಮಿ, ಶಶಿಕಲಾ, ಬ್ಯಾಡಮೂಡ್ಲು ಬಸವಣ್ಣ, ಪಿ. ಕೃಷ್ಣ ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *