22 ದಿನಗಳಲ್ಲಿ ಮಾದಪ್ಪನ ಹುಂಡಿಯಲ್ಲಿ 1.86 ಕೋಟಿ ರೂ. ಸಂಗ್ರಹ

ಹನೂರು:ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 22 ದಿನಗಳ ಅವಧಿಯಲ್ಲಿ 1.86 ಕೋಟಿ ರೂಗಳ ಸಂಗ್ರಹವಾಗಿದೆ.

ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಿ‌ ಪುರುಷೋತ್ತಮ ಹಾಗೂ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ರವರ ಸಮ್ಮುಖದಲ್ಲಿ ಬುಧವಾರ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಣಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಗೊಂಡು ಸಂಜೆ 5 ಗಂಟೆಗೆ ಮುಕ್ತಾಯವಾಯಿತು.

ಸರ್ಕಾರಿ ರಜಾ ದಿನ, ಅಮಾವಾಸ್ಯೆ ಜಾತ್ರಾ ಮಹೋತ್ಸವ ಸೇರಿದಂತೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ 22 ದಿನಗಳ ಅವಧಿಯಲ್ಲಿ 1,86,45,580 ರೂ ನಗದು ಹಣ, 14 ಗ್ರಾಂ ಚಿನ್ನ ಹಾಗೂ 600 ಗ್ರಾಂ ಬೆಳ್ಳಿಯ ವಸ್ತುಗಳನ್ನು ಹುಂಡಿಗೆ ಕಾಣಿಕೆ ಸಲ್ಲಿಸಿದ್ದಾರೆ.
ಅಲ್ಲದೆ ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 7 ನೋಟುಗಳು ಹಾಗೂ ವಿದೇಶಿಯ 02 ನೋಟುಗಳು ಕಂಡುಬಂದಿವೆ.

ಈ ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಗಂಗನ ತಿಮ್ಮಯ್ಯ, ಮರಿಸ್ವಾಮಿ ಮತ್ತು ಲೆಕ್ಕ ಪತ್ರ ಸಲಹೆಗಾರರಾದ ಮಹದೇವು.ಸಿ, ಉಪ ಕಾರ್ಯದರ್ಶಿ ಚಂದ್ರಶೇಖರ.ಜಿ.ಎಲ್, ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಛೇರಿಯ ಸುಮಂತ್, ಸರಗೂರು ಮಹಾದೇವಸ್ವಾಮಿ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಗಳು ಮತ್ತು ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಪ್ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಜರಿದ್ದರು..

Leave a Reply

Your email address will not be published. Required fields are marked *