ಚಾಮರಾಜನಗರ: ಸಚಿವರಾದ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷರು, ಡಿಸಿಎಂ ಸ್ಥಾನ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ, ಜಿ.ಪಂ.ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು ಅವರನ್ನು ಎಂಎಲ್‌ಸಿ ಮಾಡುವಂತೆ ವಾಲ್ಮೀಕಿ ನಾಯಕ ಸಮುದಾಯದ ಪರವಾಗಿ ಜಿ.ಪಂ.ಮಾಜಿ ಸದಸ್ಯ ಎಸ್.ಸೋಮನಾಯಕ ಆಗ್ರಹಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ನಾಯಕ ಸಮುದಾಯ ಪ್ರಭಾವಿ ನಾಯಕರು, ಸರಳ ಸಜ್ಜನಿಕೆ ರಾಜಕಾರಣಿ, ಸಂಘಟನೆಯ ಚತುರ, ಎಲ್ಲ ವರ್ಗದ ಸಮುದಾಯದವರು ಇಷ್ಟಪಡುವ ಧೀಮಂತ ನಾಯಕರು, ಸಚಿವರಾದ ಸತೀಶ್ ಜಾರಕಿಹೊಳಿ ಅವರು ನಿಷ್ಠಾವಂತ, ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ. ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಕಾಂಗ್ರೆಸ್ ದೊಡ್ಡಮಟ್ಟದಲ್ಲಿ ಸಂಘಟನೆ ಆಗುತ್ತದೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಅಧಿಕಾರ ಬರುವ ಎಲ್ಲ ರೀತಿಯ ಶಕ್ತಿ ಅವರಲ್ಲಿದೆ ಎಂದರು.
ಉಪ್ಪಾರ ಸಮುದಾಯದ ಏಕೈಕ ಶಾಸಕರು, ಮತದಾರರಿಗೆ ನಿತ್ಯವೂ ಸ್ಥಳೀಯವಾಗಿ ಸಿಗುವಂತಹ ಬಡವರ ಬಂಧು, ನಿಷ್ಠವಂತ, ಜಾತ್ಯಾತೀತ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರ ಅನುಭವ, ಹಿರಿತನ ಪರಿಗಣಿಸಿ ಅವರನ್ನು ಸಚಿವರಾಗಿ ಮಾಡಬೇಕು. ಅಲ್ಲದೆ ನಾಯಕ ಸಮುದಾಯದ ದಿವಂಗತ ಚಿಕ್ಕಮಾಧು ಅವರ ಪುತ್ರರಾದ ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾಧು ಅವರನ್ನು ಸಚಿವರನ್ನಾಗಿ ಮಾಡಬೇಕು ಇದಲ್ಲದೆ ಜಿ.ಪಂ. ಮಾಜಿ ಅಧ್ಯಕ್ಷರಾಗಿ, ವಾಲ್ಮೀಕಿ ನಿಗಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕಾಂಗ್ರೆಸ್ ಮುಖಂಡ ಎಸ್.ಸಿ.ಬಸವರಾಜು ಅವರನ್ನು ವಿಧಾನಪರಿಷತ್ ಸದಸ್ಯರಾಗಿ ಮಾಡುವಂತೆ ಕಾಂಗ್ರೆಸ್ ಕೇಂದ್ರ, ರಾಜ್ಯ ವರಿಷ್ಠರಲ್ಲಿ ಎಸ್.ಸೋಮನಾಯಕ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಎಸ್ ಟಿ ವಿಭಾಗದ ಮಾಜಿ ಜಿಲ್ಲಾಧ್ಯಕ್ಷ ಪಾಳ್ಯ ಕೃಷ್ಣನಾಯಕ, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯ ಅಮಚವಾಡಿ ರಾಜು, ಮುಖಂಡರಾದ ರಂಗಸ್ವಾಮಿ ಯಾನಗಹಳ್ಳಿ, ಹೆಚ್.ಎಂ.ಶಿವಣ್ಣ ಹಾಜರಿದ್ದರು.