- ತಂಬಾಕು ಸೇವನೆಯಿಂದ ದೂರವಿರಿ: ಜಿ.ಪಂ.ಸಿಇಓ ಮೋನಾರೋತ್
ಚಾಮರಾಜನಗರ: ಮೈಸೂರಿನ ಕ್ಲಿಯರ್‌ಮೆಡಿ ರೇಡಿಯಂಟ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ನಗರದಲ್ಲಿ ವಾಕಥಾನ್ ಬಹಳ ಯಶಸ್ವಿಯಾಗಿ ನಡೆಯಿತು.
ಕ್ಲಿಯರ್‌ಮೆಡಿ ರೇಡಿಯಂಟ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಮೈಸೂರು, ರೆಡ್ ಕ್ರಾಸ್, ರೋಟರಿ ಕ್ಲಬ್ ಅಸೋಸಿಯೇಷನ್ ಹಾಗೂ ಬಸವರಾಜೇಂದ್ರ ಆಸ್ಪತ್ರೆ, ಚಾಮರಾಜನಗರ ಇವರ ಸಹಯೋಗದಲ್ಲಿ ವಾಕಥಾನ್ ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಭವನದವರೆಗೆ ನಡೆಯಿತು.
ಜಿ.ಪಂ.ಸಿಇಓ ಮೋನಾರೋತ್ ವಾಕಥಾನ್ ಗೆ ಚಾಲನೆ ನೀಡಿದ ಮಾತನಾಡಿ, ಆರೋಗ್ಯಕ್ಕೆ ಮಾರಕವಾಗಿರುವ ತಂಬಾಕು ಸೇವನೆಯಿಂದ ದೂರವಿರಬೇಕು. ಧೂಮಪಾನ ಮತ್ತು ತಂಬಾಕಿನ ಉತ್ಪನ್ನಗಳನ್ನು ತ್ಯಜಿಸಿ ಆರೋಗ್ಯ ಕಾಪಾಡಿಕೊಳ್ಳಿ. ತಂಬಾಕು ಮುಕ್ತ ಸ್ವಸ್ಥ ಸಮಾಜ ಹಾಗೂ ಆರೋಗ್ಯವಂತ ಭಾರತವನ್ನು ರೂಪಿಸುವಲ್ಲಿ ಕೈಜೋಡಿಸಬೇಕು ಎಂದು ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಗಂಗಾಧರ್ ಮಾತನಾಡಿ, ತಂಬಾಕು ಸೇವನೆಯಿಂದ ಜಗತ್ತಿನಲ್ಲಿ ಕೋಟ್ಯಾಂತರ ಸಾವು ಆಗುತ್ತಿದೆ. ಶಾಲಾ-ಕಾಲೇಜು ಹಂತದಲ್ಲಿ ಇದು ಹೆಚ್ಚಾಗುತ್ತಿದೆ. ಹೆಣ್ಣು ಮಕ್ಕಳು ಒಳಾಗಿರುವುದನ್ನು ಕಾಣುತ್ತಿದ್ದೇವೆ. ಇದು ವಿಷಾಧಕರ ಸಂಗತಿಯಾಗಿದೆ. ತಂಬಾಕನ್ನು ಒಬ್ಬರು ಸೇವನೆ ಮಾಡಿದರೆ ಅಕ್ಕಪಕ್ಕದವರಿಗೆ ತೊಂದರೆ ಉಂಟು ಮಾಡುತ್ತದೆ ಎಂದರು.
ಡಿಹೆಚ್ ಓ ಡಾ.ಚಿದಂಬರಂ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗ ಹೆಚ್ಚಾಗಿದೆ. ಫ್ಯಾಷನ್ ಗಾಗಿ ಧೂಪಮಾನ ಚಟಕ್ಕೆ ಯುವಜನಾಂಗ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಅಂತಹ ಮಾರಕ ತಂಬಾಕಿನ ಉತ್ಪನ್ನ ಗಳಿಂದ ದೂರವಿರಬೇಕು ಎಂದರು.
ಬಸವರಾಜೇಂದ್ರ ಆಸ್ಪತ್ರೆಯ ಡಾ.ಬಸವರಾಜೇಂದ್ರ ಮಾತನಾಡಿ, ಕೇರಳ ರಾಜ್ಯ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ತಂಬಾಕು ನಿಷೇಧಿಸಲಾಗಿದೆ. ಅದೇ ರೀತಿ ರಾಜ್ಯದಲ್ಲೂ ನಿಷೇಧ ಮಾಡಲು ಸರ್ಕಾರ ಒಂದು ದೃಢ ನಿರ್ಧಾರ ಮಾಡಬೇಕು ಎಂದರು.
ಡಾ.ರವಿ ಮಾತನಾಡಿ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಬಗ್ಗೆ ಉದ್ಯಮಗಳ ಮೋಸಕಾರಿ ತಂತ್ರಗಳನ್ನು ಬಯಲಿಗೆಳೆಯುವುದು, ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳು ಹಾಗೂ ಕ್ಯಾನ್ಸರ್ ತಡೆಗಟ್ಟುವಿಕೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಾಕಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವಾಕಥಾನ್ ನಲ್ಲಿ ಡಾ.ಶ್ವೇತ, ಡಾ.ರಕ್ಷಿತ್ ಶೃಂಗೇರಿ, ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು, ಮಾಜಿ ಅಧ್ಯಕ್ಷ ಶ್ರೀನಿವಾಸನ್, ಸಿಮ್ಸ್ ಪ್ರಾಂಶುಪಾಲ ಡಾ.ಅಜಯ್, ಐಟಿಐ ಕಾಲೇಜು ಪ್ರಾಂಶುಪಾಲ ಡಾ.ರಂಗಸ್ವಾಮಿ,ಕ್ಲಿಯರ್‌ಮೆಡಿ ರೇಡಿಯಂಟ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ
ವಿಭಾಗೀಯ ಮುಖ್ಯಸ್ಥ ರವಿಕುಮಾರ್, ವ್ಯವಹಾರ ಮುಖ್ಯಸ್ಥ ಚಲಂ, ಮಾರ್ಕೆಟಿಂಗ್ ಮ್ಯಾನೇಜರ್ ಸುನೀಲ್ ಕುಮಾರ್, ಮೋಹನ್ ಕುಮಾರ್, ನಿತಿನ್, ವಿಮಲ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.