ಚಾಮರಾಜನಗರ : ಶೃಂಗೇರಿಯ ಶ್ರೀ ಶಾರದಾ ಪೀಠ ವಿಶ್ವದಲ್ಲಿ ಧರ್ಮ ಮತ್ತು ಅಧ್ಯಾತ್ಮದ ಸರ್ವಶ್ರೇಷ್ಠ ಪೀಠವಾಗಿದೆ. ಶೃಂಗೇರಿಯ ಭಕ್ತರಾಗಿರುವ ನಾವೆಲ್ಲರೂ ಪುಣ್ಯವಂತರು.ಶೃಂಗೇರಿ ಶ್ರೀ ಶಾರದಾ ಪೀಠದ 34ನೇ ಜಗದ್ಗುರುವಾಗಿ ಇಡೀ ಜಗತ್ತಿಗೆ ಧರ್ಮದ ಶಕ್ತಿಯನ್ನು, ಆತ್ಮಜ್ಞಾನವನ್ನು ಪ್ರಸರಿಸಿದ ಮಹಾ ತಪಸ್ವಿ, ಅವಧೂತರು ಶ್ರೀ ಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳವರು ಎಂದು ಶ್ರೀ ಶಂಕರ ಅಭಿಯಾನ ಕರ್ನಾಟಕದ ಪ್ರಧಾನರಾದ, ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಶ್ರೀ ಶಾರದಾ ಶಂಕರ ಭಕ್ತ ಮಂಡಳಿ, ಜೈಹಿಂದ್ ಪ್ರತಿಷ್ಠಾನ, ಋಗ್ವೇದಿ ಕುಟೀರದಲ್ಲಿ ಹಮ್ಮಿಕೊಂಡಿದ್ದ ಶೃಂಗೇರಿ ಶ್ರೀ ಶಾರದಾ ಪೀಠದ 34ನೇ ಜಗದ್ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳವರ ಆರಾಧನಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸದಾ ಆತ್ಮಧ್ಯಾನದಲ್ಲಿ ನಿರತರಾಗಿ, ವಿಷಯ ಸುಖಗಳಿಂದ ವಿಮುಖರಾಗಿ, ಶಾಸ್ತ್ರಗಳಲ್ಲಿ ಅಪಾರ ಪಾಂಡಿತ್ಯ ಪಡೆದ ಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳವರಿಗೆ ಸದಾ ಕಾಲ ಭಕ್ತರು ಋಣಿಯಾಗಿದ್ದಾರೆ.
1882ರ ಅಕ್ಟೋಬರ್ 16ರಂದು ಜನಿಸಿದ ಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳವರು ಶೃಂಗೇರಿ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ಶಿವಾಭಿನವ ನರಸಿಂಹ ಭಾರತಿ ಮಹಾಸ್ವಾಮಿಗಳವರ ಸನ್ನಿಧಿಯಲ್ಲಿ ಸಮರ್ಪಿತರಾಗಿ ಶೃಂಗೇರಿ ಮತ್ತು ಬೆಂಗಳೂರು ಪಾಠಶಾಲೆಗಳಲ್ಲಿ ಅಧ್ಯಯನ ನಿರತರಾಗಿ,, ವೇದ, ವೇದಾಂಗ, ಉಪನಿಷತ್ತು, ವ್ಯಾಕರಣ, ಅಲಂಕಾರ, ಕಾವ್ಯ, ನಾಟಕ ಸೇರಿದಂತೆ ಎಲ್ಲಾ ಶಾಸ್ತ್ರಗಳಲ್ಲೂ ಅಪೂರ್ವ ಪಾಂಡಿತ್ಯವನ್ನು ಗಳಿಸಿ ತಮ್ಮ ಸಾಧಾರಣ ಬುದ್ಧಿಶಕ್ತಿ,ವಿವೇಕ,ತೀಕ್ಷ್ಣತೆ, ಆಳವಾದ ವೈರಾಗ್ಯ ಮತ್ತು ಆತ್ಮ ಸಾಕ್ಷಾತ್ಕಾರದ ಮೂಲಕ ಇಡೀ ಜಗತ್ತಿಗೆ ಆಧ್ಯಾತ್ಮಿಕ ಚಿಂತನೆ ಮತ್ತು ಶ್ರೇಷ್ಠತ್ವಗಳನ್ನು ನೀಡಿದವರು.
ತಮ್ಮ 20ನೇ ವಯಸ್ಸಿನಲ್ಲಿ ಜಗದ್ಗುರುಗಳಾಗಿ ವಿಶ್ವದ ಪ್ರಸಿದ್ಧ ಶಾರದಾ ಪೀಠದ ಕೀರ್ತಿ, ಜ್ಞಾನ ಮತ್ತು ಮಹತ್ವವನ್ನು ಉಳಿಸಿ ಬೆಳೆಸಿದವರು. ಚಂದ್ರಶೇಖರ ಭಾರತಿ ಮಹಾಸ್ವಾಮಿಗಳವರ ದರ್ಶನ ಪಡೆದ ನೂರಾರು ಭಕ್ತರು ಅವರ ದಿವ್ಯದೃಷ್ಟಿಯಲ್ಲಿ ಆಧ್ಯಾತ್ಮಿಕ ಪರಿವರ್ತನೆಯನ್ನು ಅನುಭವಿಸಿದ ಅನೇಕ ದೃಷ್ಟಾಂತಗಳನ್ನು ಕಾಣಬಹುದಾಗಿದೆ. ಚಂದ್ರಶೇಖರ ಭಾರತೀಯರ ಮೌನ, ವೈರಾಗ್ಯ ಮತ್ತು ಸಾನಿಧ್ಯವೂ ಭಕ್ತರಲ್ಲಿ ಅಪಾರವಾದ ಶಕ್ತಿಯನ್ನು, ಚೈತನ್ಯವನ್ನು,ಆತ್ಮಜ್ಞಾನದ ವಿವೇಕವನ್ನು ಬೆಳೆಸಿ ಇಂದಿಗೂ ಕೂಡ ಜಗತ್ತಿನ ಎಲ್ಲಡೆ ಚಂದ್ರಶೇಖರ ಭಾರತಿರವರ ಆರಾಧನೆ ನಡೆಯುವ ಮೂಲಕ ಭಕ್ತರು ಧನ್ಯರಾಗುತ್ತಿದ್ದಾರೆ ಎಂದು ತಿಳಿಸಿದರು.
ಆರಾಧನಾ ಕಾರ್ಯಕ್ರಮದಲ್ಲಿ ಬ್ರಾಹ್ಮಿ ಮಹಿಳಾ ಸಂಘದ ಮಾಜಿ ಅಧ್ಯಕ್ಷರಾದ ವತ್ಸಲ ರಾಜಗೋಪಾಲ್, ಶಾರದಾ ಶಂಕರ ಭಕ್ತ ಮಂಡಳಿಯ ನಾಗಸುಂದರ್, ಮುರುಗೇಶ್ ಭೋಜರಾಜ್,ಕುಸುಮ ಮಾಲಾ ಸರಸ್ವತಿ, ಶ್ರಾವ್ಯಋಗ್ವೇದಿ,ಸಾನಿಕ ಮುಂತಾದವರು ಉಪಸ್ಥಿತರಿದ್ದರು