- ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಸಿ. ಶಂಕರ ಅಂಕನಶೆಟ್ಟಿಪುರ


ಚಾಮರಾಜನಗರ: ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಖಾಯಂ ಆಗಿ ಸ್ವಚ್ಚತಾ ಕಾರ್ಮಿಕರನ್ನು ನೇಮಿಸಿಕೊಂಡು ತಿಂಗಳ ವೇತನ ಪಾವತಿಸಲು ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಸಿ. ಶಂಕರ ಅಂಕನಶೆಟ್ಟಿಪುರ ಅವರು ತಿಳಿಸಿದರು.ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಚತಾ ಕಾರ್ಮಿಕ ಸೇವೆ ಸಂಬಂಧ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅವರು ಮಾತನಾಡಿದರು.
ಜಿಲ್ಲಾ ವ್ಯಾಪ್ತಿಯಲ್ಲಿ 22 ಪೊಲೀಸ್ ಠಾಣೆಗಳಿದ್ದು, ಇಲ್ಲಿ ಖಾಯಂ ಸ್ವಚ್ಚತಾ ಕಾರ್ಮಿಕರು ನೇಮಕವಾಗಿಲ್ಲ. ತಿಂಗಳ ವೇತನ ನಿಗದಿಯಾಗಿಲ್ಲ. ಇಂತಿಷ್ಟು ಎಂದು ಹಣ ನಿಗದಿ ಮಾಡಿ ಸ್ವಚ್ಚತಾ ಕಾರ್ಮಿಕರ ಸೇವೆ ಪಡೆದುಕೊಳ್ಳಲಾಗುತ್ತಿದೆ. ಇನ್ನು ಮುಂದೆ ಖಾಯಂ ಆಗಿ ಸ್ವಚ್ಚತಾ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪೊಲೀಸ್ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಬೇಕು. ಸಫಾಯಿ ಕರ್ಮಚಾರಿಗಳ ಆಯೋಗವು ಸಹ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಸದಸ್ಯರಾದ ಸಿ. ಶಂಕರ ಅಂಕನಶೆಟ್ಟಿಪುರ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅವರು ಸ್ವಚ್ಚತಾ ಕಾರ್ಮಿಕರ ಸೇವೆ ಸಂಬಂಧ ವಿವರ ನೀಡಿದರು.
ಇದಕ್ಕೂ ಮೊದಲು ಆಯೋಗದ ಸದಸ್ಯರಾದ ಸಿ. ಶಂಕರ ಅಂಕನಶೆಟ್ಟಿಪುರ ಅವರು ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದ ಕಲರ್ ಟೋನ್ ಟೆಕ್ಸ್‍ಟೈಲ್ಸ್ ಗೆ ಭೇಟಿ ನೀಡಿ ಸ್ವಚ್ಚತಾ ಕಾರ್ಮಿಕರಿಗೆ ನೀಡಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.
ಕಾರ್ಮಿಕರ ಕನಿಷ್ಠ ವೇತನ ಕಾಯ್ದೆಯಡಿ ಕಾರ್ಮಿಕರಿಗೆ ವೇತನ, ವಿಮೆ, ಇನ್ನಿತರ ಸೌಲಭ್ಯಗಳು ತಲುಪಬೇಕು. ಸ್ವಚ್ಚತಾ ಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ಯಾವುದೇ ಸಮಸ್ಯೆಗಳಿಗೆ ಅವಕಾಶವಾಗದಂತೆ ಕಾರ್ಮಿಕರ ಆರೋಗ್ಯ ಹಾಗೂ ಸವಲತ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಯೋಗದ ಸದಸ್ಯರಾದ ಸಿ. ಶಂಕರ ಅಂಕನಶೆಟ್ಟಿಪುರ ಅವರು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆಯ ಸಿಬ್ಬಂದಿ ಈ ಸಂದರ್ಭದಲ್ಲಿ ಇದ್ದರು.
